ಸದನದಲ್ಲಿ ಆಡಳಿತ-ವಿಪಕ್ಷ ವಾಕ್ಸ್‌ಮರ

ನಿಲುವಳಿ ಸೂಚನೆ ನಕಾರ
ಬೆಂಗಳೂರು, ಫೆ. ೧೪- ರಾಜ್ಯದ ಕಾನೂನು ಸುವ್ಯವಸ್ಥೆಯ ವಿಚಾರವನ್ನು ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಲು ಅವಕಾಶ ಇಲ್ಲ ಎಂಬ ವಿಚಾರ ವಿಧಾನಸಭೆಯಲ್ಲಿಂದು ಆಡಳಿತ ಹಾಗೂ ವಿಪಕ್ಷಗಳ ನಡುವೆ ಕಾವೇರಿದ ಚರ್ಚೆಗೆ ಎಡೆಮಾಡಿ ಕೊಟ್ಟಿತು.
ಇಂದು ಸದನ ಆರಂಭವಾಗುತ್ತಿದಂತೆಯೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ನಿಲುವಳಿ ಸೂಚನೆಯಡಿ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಈ ಹಂತದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕಾನೂನು ಸುವ್ಯವಸ್ಥೆಯ ವಿಚಾರವನ್ನು ನಿಯಮಾವಳಿಗಳ ಪ್ರಕಾರ ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶ ಇಲ್ಲ. ಈ ಬಗ್ಗೆ ಸಭಾಧ್ಯಕ್ಷರ ರೂಲಿಂಗ್ ಸಹ ಇದೆ. ನೀವು ಅವಕಾಶ ಕೊಡುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ನಿಯಮಾವಳಿಗಳಂತೆ ಇದನ್ನು ನಿಲುವಳಿಯಡಿ ತೆಗೆದುಕೊಳ್ಳಲು ಆಗದು ಎಂದರು.
ಆಗ ಬಿಜೆಪಿಯ ಸುರೇಶ್‌ಕುಮಾರ್ ಮಾತನಾಡಿ, ಗೃಹ ಸಚಿವರು ಹೇಳುವುದನ್ನು ನಾನು ಒಪ್ಪುತ್ತೇನೆ. ಆದರೆ ಇದು ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿದ್ದು. ಈ ಹಿಂದೆ ಈ ಬಗ್ಗೆ ನಿಲುವಳಿಯಡಿಯೇ ಚರ್ಚೆಯಾಗಿದೆ ಎಂದರು.
ವಿಪಕ್ಷ ನಾಯಕ ಆರ್. ಅಶೋಕ್ ಸಹ ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಸುಲಿಗೆಯಂತಹ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಸರ್ಕಾರದ ಗಮನ ಸೆಳೆಯಬೇಕಿದೆ. ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಿ ಎಂದರು.
ಆಗ ಮತ್ತೆ ಎದ್ದುನಿಂತ ಗೃಹ ಸಚಿವರು ಇದನ್ನು ನಿಲುವಳಿಯಡಿ ಚರ್ಚೆ ಮಾಡಲು ಬರಲ್ಲ. ಬೇರೆ ರೀತಿಯ ಚರ್ಚೆಗೆ ಅವಕಾಶ ಕೊಡಿ, ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.
ಆಗ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ನಿಯಮಾವಳಿಗಳಡಿ ಈ ವಿಚಾರ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಚರ್ಚೆಗೆ ತೆಗೆದುಕೊಂಡ ಸಂಪ್ರದಾಯಗಳಿವೆ. ಆದರೂ ನಿಲುವಳಿ ಸೂಚನೆಯಡಿ ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ನಿಯಮ ೬೯ ರಡಿ ಬೇಕಾದರೆ ಚರ್ಚೆಗೆ ಅವಕಾಶ ಕೊಡುತ್ತೇವೆ. ಈಗ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಇದೆ. ಅದರಲ್ಲೇ ನೀವು ಪ್ರಸ್ತಾಪಿಸಬಹುದು ಎಂದು ವಿಪಕ್ಷ ನಾಯಕ ಅಶೋಕ್ ಅವರಿಗೆ ಸಲಹೆ ಮಾಡಿದರು.
ಈ ಹಂತದಲ್ಲಿ ಮಾತನಾಡಿದ ಡಾ. ಜಿ. ಪರಮೇಶ್ವರ್ ಅವರು, ಸಭಾಧ್ಯಕ್ಷರೇ ನೀವು ಹೇಳಿದ್ದು ಸರಿ. ಅವರು ರಾಜ್ಯಪಾಲರ ಭಾಷಣದಲ್ಲೇ ಎಲ್ಲವನ್ನೂ ಮಾತನಾಡಲಿ ಎಂದರು.
ಆಗ ವಿಪಕ್ಷ ನಾಯಕ ಆರ್. ಅಶೋಕ್, ನಾನು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತೇನೆ. ಆದರೆ ಗೃಹ ಸಚಿವರು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರತ್ಯೇಕ ಉತ್ತರ ಕೊಡಬೇಕು ಎಂಬ ಬೇಡಿಕೆಯನ್ನು ಇಟ್ಟರು. ಇದಕ್ಕೆ ಗೃಹ ಸಚಿವರು ಸಮ್ಮತಿಸಿದರು.
ಇದಾದ ನಂತರ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.