ಸದನದಲ್ಲಿ ಅಭಿವೃದ್ಧಿ ವಿಷಯ ಚರ್ಚೆಯಾಗಲಿ: ರವಿ ಗೌರ

ಅಫಜಲಪುರ:ಮಾ.26 : ಕರ್ನಾಟಕ ವಿಧಾನಸಭೆಯು ಈ ನಾಡಿನ ಸಾರ್ವಜನಿಕ ಸಮಸ್ಯೆಗಳ ಬಗ್ಗೆ, ನಾಡಿನ ಏಳಿಗೆ ಕುರಿತು ಅಭಿವೃದ್ದಿ ಯೋಜನೆಗಳ ಕುರಿತು ಚರ್ಚಿಸಲು ರಚನೆಯಾಗಿದ್ದು, ಸದನ ಘನತೆ ಮತ್ತು ಗೌರವದ ಬಗ್ಗೆ ಅರಿಯದ ಸಚಿವ ಡಾ.ಕೆ. ಸುಧಾಕರ ಅವರು ಜವಾಬ್ದಾರಿ ಹುದ್ದೆಯಲ್ಲಿದ್ದು ಸದನದ ಘನತೆಗೆ ಚ್ಯುತಿ ತಂದಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಗೌರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಇಂತಹ ಒಂದಿಲ್ಲೊಂದು ಪ್ರಕರಣಗಳು ಹೊರಬರುತ್ತಿರುವುದರಿಂದ ಸದನದ ಸಮಯ ವ್ಯರ್ಥವಾಗುತ್ತಿದೆ. ಸದನದಲ್ಲಿ ಚರ್ಚೆಯಾಗಬೇಕಿರುವ ವಿಷಯಗಳು ಈ ನಾಡಿನ ಅಭಿವೃದ್ಧಿಗೆ ಪೂರಕವಾಗಿ ಇರಬೇಕು. ಏಕಪತ್ನಿವೃತಸ್ಥ ಹೇಳಿಕೆ ನೀಡಿದ್ದ ಸಚಿವ ಸುಧಾಕರ ಅವರು ಸದನವನ್ನು ‘ಹಳ್ಳಿಕಟ್ಟೆ’ ಎಂದು ತಿಳಿದುಕೊಂಡಿರಬಹುದು. ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಜನರಿಂದ ಆಯ್ಕೆಯಾದ ಇವರುಗಳು ರಾಸಲೀಲೆಗಳ ಸತ್ಯಾಸತ್ಯೆತೆ ಬಗ್ಗೆ ಚರ್ಚಿಸುವುದು ನೋಡಿದರೆ ಇದು ನಾಡಿನ ದುರಂತವೇ ಸರಿ. ಹೀಗಾಗಿ ರಾಜ್ಯದ ಅಭಿವೃದ್ಧಿಗಳ ಕುರಿತು ವಿಧಾನ ಸಭೆಯಲ್ಲಿ ಚರ್ಚಿಸಬೇಕು ವಿನಃ ಇಂತಹ ಇಲ್ಲಸಲ್ಲದ ವಿಷಯಗಳನ್ನು ಚರ್ಚಿಸಬಾರದು ಎಂದು ಆಗ್ರಹ ಪಡಿಸಿದ್ದಾರೆ.