ಸದನಕ್ಕೆ ಗೈರು ಹೊರಟ್ಟಿ ಗರಂ

ಬೆಳಗಾವಿ, ಡಿ.೪- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲನೇ ದಿನವೇ ಆರು ಸಚಿವರು ಗೈರಾಗಿರುವುದಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆಗಿ ಸರ್ಕಾರಕ್ಕೆ ಚಾಟಿ ಬೀಸಿದರು.ಪ್ರಶ್ನೋತ್ತರ ಕಲಾಪ ವೇಳೆ ಪ್ರಸ್ತಾಪಿಸಿದ ಅವರು, ಆರು ಸಚಿವರು ಗೈರಾಗಿದ್ದಾರೆ. ಜೊತೆಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವ ಹಿನ್ನೆಲೆ ಬರುವುದಿಲ್ಲ ಎಂದೂ ಪತ್ರವೊಂದನ್ನು ಕಳುಹಿಸಿದ್ದಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಸಭಾನಾಯಕ ಬೋಸರಾಜು ಅವರು ತಿಳಿ ಹೇಳಬೇಕು ಎಂದು ಹೇಳಿದರು.ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ಸದಸ್ಯರು, ಅಧಿವೇಶನಕ್ಕಿಂತ ಪೂರ್ವ ನಿಯೋಜಿತ ಕಾರ್ಯಕ್ರಮ ಮುಖ್ಯವೇ. ಸಂಬಂಧಿಸಿದ ಸಚಿವರೇ ಇಲ್ಲದಿದ್ದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಹೇಗೆ ದೊರೆಯುತ್ತದೆ. ಎಲ್ಲವನ್ನೂ ಸಭಾ ನಾಯಕರೇ ಹೇಳುವುದು ಒಳ್ಳೆಯದಲ್ಲ ಎಂದು ಏರು ಧ್ವನಿಯಲ್ಲಿ ಪ್ರಸ್ತಾಪಿಸಿದರು.ಆಗ ಸಭಾ ನಾಯಕ ಬೋಸರಾಜು, ಸಚಿವರ ಹಾಜರಿ ಸರಿಪಡಿಸುವುದಾಗಿ ತಿಳಿಸಿದರು.