ಸದನಕ್ಕೆ ಗೈರಾಗಬೇಡಿ:ಶಾಸಕರಿಗೆ ಸಿಎಂ ಸಲಹೆ

ನೂತನ ಶಾಸಕರಿಗೆ ತರಬೇತಿ ಶಿಬಿರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನ, ಮಹದೇವಪುರದಲ್ಲಿರುವ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್-ಕ್ಷೇಮವನದಲ್ಲಿ ಆಯೋಜಿಸಲಾಗಿರುವ ನೂತನ ಶಾಸಕರ ತರಬೇತಿ ಶಿಬಿರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು.
ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ.ಎಸ್.ಹೊರಟ್ಟಿ, ಸಚಿವರಾದ ಎಚ್.ಕೆ. ಪಾಟೀಲ್, ಜಮೀರ್ ಅಹ್ಮದ್ ಇದ್ದಾರೆ.

ಬೆಂಗಳೂರು, ಜೂ.೨೬- ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು ಆದಷ್ಟು ಗೈರನ್ನು ಕಡಿಮೆ ಮಾಡಿ ಸದನದ ಕಲಾಪಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ನೂತನ ಶಾಸಕರಿಗೆ ಸಲಹೆ ನೀಡಿದರು.
ವಿಧಾನಸಭಾ ಸಚಿವಾಲಯ ನಗರದ ಹೊರವಲಯದ ನೆಲಮಂಗಲದ ಎಸ್.ಡಿ.ಎಮ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನದಲ್ಲಿ ರಾಜ್ಯದ ೧೬ನೇ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಮೂರು ದಿನಗಳ ಹಮ್ಮಿಕೊಂಡಿರುವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಶಾಸಕರು ಸದನಕ್ಕೆ ತಪ್ಪದೇ ಹಾಜರಾಗುವ ಮೂಲಕ ಮತ್ತೊಬ್ಬರಿಗೆ ಸ್ಫೂರ್ತಿಯಾಗಬೇಕು ಎಂದರು.
ಬಹಳಷ್ಟು ಮಂದಿಗೆ ಜೀವನದಲ್ಲಿ ಒಂದು ಬಾರಿಯಾದರೂ ಶಾಸಕನಾಗುವ ಆಸೆ ಇರುತ್ತೇ.ಆದರೆ, ಶಾಸಕನಾದ ಮೇಲೆ ವಿಧಾನಸೌಧದ ಒಳಗಡೆಯೇ ಬರುವುದಿಲ್ಲ. ಇದು ಸರಿಯಲ್ಲ ಅಧಿವೇಶನದಲ್ಲಿ ಪಾಲ್ಗೊಂಡು ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರದಿಂದ ಪರಿಹಾರ ಕಂಡುಕೊಳ್ಳಬೇಕು ಎಂದರು.
ಬಹಳಷ್ಟು ಮಂದಿ ಶಾಸಕರಿಗೆ ದುಡ್ಡು ಇದ್ದರೆ ಚುನಾವಣೆ ಗೆಲ್ಲಬಹುದು ಎಂಬ ಭಾವನೆ ಇದೆ. ದುಡ್ಡು ಇದ್ದರೆ ಗೆಲುವು ಸಾಧ್ಯವಿಲ್ಲ.ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಪರವಾಗಿ ಕೆಲಸ ಮಾಡಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಹಣ ಇದ್ದರೆ ಗೆಲ್ಲುತ್ತೇವೆ ಎಂಬುದು ಸುಳ್ಳು. ಹೀಗಾಗಿ ಜನಪರ ಕೆಲಸಗಳಿಗೆ ಆದ್ಯತೆ ನೀಡಿ ಜನರ ಪರವಾಗಿ ಕೆಲಸ ಮಾಡಿ ಎಂದು ಅವರು ನೂತನ ಶಾಸಕರಿಗೆ ಕಿವಿಮಾತು ಹೇಳಿದರು.
೨೨೪ ಶಾಸಕರಲ್ಲಿ ಮೊದಲ ಬಾರಿಗೆ ೭೦ ಜನರು ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ. ಈ ಪೈಕಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಜನಾರ್ದನ ರೆಡ್ಡಿ, ಅಲ್ಲಂ ಪ್ರಭು ಅವರು ಸೇರಿದಂತೆ ಒಟ್ಟು ೬೭ ಜನ ಶಾಸಕರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ ಎಂದರು.
ಈಗಿನ ಕಾಲದಲ್ಲಿ ಶಾಸಕರಾಗುವುದು ಕಷ್ಟವಾಗುವುದು ಬಹಳ ಕಷ್ಟ. ಅನೇಕರು ಹೋರಾಟ ಮಾಡಿ ವಿಧಾನಸಭೆ ಬಂದಿದ್ದಾರೆ. ಜನರು ಎಲ್ಲರ ಮೇಲೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಜನರ ನಿರೀಕ್ಷೆಯಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜಕೀಯ ಅಷ್ಟೊಂದು ಸುಲಭವಲ್ಲ, ತುಂಬಾ ಕಠಿಣವಾಗಿದೆ. ಕೆಲವೊಂದು ವಾತಾವರಣದಿಂದ ಪ್ರಜಾಪ್ರಭುತ್ವ ಜೀವಂತವಾಗಿ ಇರಲಿದೆಯೇ ಎನ್ನುವ ಅನುಮಾನ ಉಂಟಾಗಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಮೂರು ದಿನಗಳ ನಡೆಯುವ ಈ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, ಹೊಸ ವಿಚಾರ, ಸದನದ ಪ್ರಕ್ರಿಯೆ ಕುರಿತು ತಿಳಿದುಕೊಳ್ಳಬೇಕು. ಜತೆಗೆ, ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಸದನದ ಗಮನಕ್ಕೆ ತರಬೇಕು ಎಂದರು.
೧೩ ಶಾಸಕರು ಗೈರು..!
ನೆಲಮಂಗಲದ ಎಸ್.ಡಿ.ಎಮ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನದಲ್ಲಿ ರಾಜ್ಯದ ೧೬ನೇ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ ೧೩ ನೂತನ ಶಾಸಕರು ಗೈರಾಗಿದ್ದಾರೆ.
೬೯ ಶಾಸಕರ ಪೈಕಿ ೫೬ ಶಾಸಕರು ಈ ಶಿಬಿರಕ್ಕೆ ಹಾಜರಾಗಿದ್ದು, ೧೩ ಶಾಸಕರು ಗೈರಾಗಿ, ವಿವಿಧ ವೈಯುಕ್ತಿಕ ಕಾರಣಗಳನ್ನು ನೀಡಿದ್ದಾರೆ.