ಸತ್ಸಂಗದಿಂದ ಮನಸ್ಸಿನ ಶುದ್ಧೀಕರಣ ಸಾಧ್ಯ

ಕಲಬುರಗಿ:ನ.21:ಆಧುನಿಕ ಒತ್ತಡದ ಬದುಕಿನಲ್ಲಿ ವ್ಯಕ್ತಿಯಿಂದು ತನ್ನ ಆರೋಗ್ಯದೆಡೆ ಅಲಕ್ಷ್ಯ ಮಾಡಿ ಅನೇಕ ರೋಗಗಳಿಗೆ ಆಮಂತ್ರಣ ನೀಡುತ್ತಿದ್ದಾನೆ. ನಿಯಮಿತವಾದ ನಡಿಗೆ, ಯೋಗ, ಧ್ಯಾನ ಮಾಡುವದರಿಂದ ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆ ಸಾಧ್ಯವಿದೆ. ಶರಣರ, ಮಹಾತ್ಮರ ನುಡಿಗಳನ್ನು ಆಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಲು ಸತ್ಸಂಗಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದ್ದು, ಇದರಿಂದ ಮನಸ್ಸಿನ ಶುದ್ಧೀಕರಣ ಸಾಧ್ಯವಿದೆಯೆಂದು ವಿಹಂಗಂ ಯೋಗ ಸಂಸ್ಥಾನದ ರಾಷ್ಟ್ರೀಯ ಮಹಿಳಾ ಉಪಾಧಿಷ್ಟ ಪೂನಂ ಶರ್ಮಾ ಅಭಿಮತ ವ್ಯಕ್ತಪಡಿಸಿದರು.
ಅವರು ನಗರದ ಕೆಎಚ್‍ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಸಂಸ್ಥಾನದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲಾ ಉಪಾಧಿಷ್ಟ ನಾಗೇಂದ್ರಪ್ಪ ಆರ್.ಡಂಡೋತಿಕರ್ ಮಾತನಾಡಿ, ವಿಹಂಗಮ ಯೋಗದಿಂದ ಆತ್ಮಕಲ್ಯಾಣ ಸಾಧ್ಯವಿದೆ. ಮನಸ್ಸನ್ನು ನಿಯಂತ್ರಿಸಿ ಉನ್ನತವಾದ ಸಾಧನೆ ಮಾಡಲು ಪೂರಕವಾಗಿದೆ. ಆತ್ಮ ಜಾಗೃತಿಯಾದರೆ ದೈವಾನುಗೃಹ ಸಾಧ್ಯವಿದೆ. ಮಾನವ ಜನ್ಮ ದೊಡ್ಡದು. ಅದನ್ನು ಸಾರ್ಥಪಡಿಸಿಕೊಳ್ಳಬೇಕು. ನಮ್ಮಲ್ಲಿರುವ ಅರಿವು ಜಾಗೃತಿಯಾಗಲು ಧ್ಯಾನ ಅಗತ್ಯ. ಯೋಗ, ಸತ್ಸಂಗ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಅದಕ್ಕಾಗಿ ತಪ್ಪದೆ ಎಲ್ಲರೂ ಯೋಗ, ಧ್ಯಾನ, ಸತ್ಸಂಗ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಸಂಸ್ಥಾನದ ಉಪಾಧಿಷ್ಟ ಶುಶೀಲ ಕವಲದಾರ್, ಪ್ರಮುಖರಾದ ಎಚ್.ಬಿ.ಪಾಟೀಲ, ಸಂಜೀವಕುಮಾರ ಶೆಟ್ಟಿ, ಬಾಲಕೃಷ್ಣ ಕುಲಕರ್ಣಿ, ದೇವೇಂದ್ರಪ್ಪ ಗಣಮುಖಿ, ಮಹಾಂತೇಶ ಬಿರಾದಾರ ಅಣ್ಣಾರಾಯ ಮಂಗಾಣೆ, ಚಂದ್ರಕಾಂತ ತಳವಾರ, ರಮೇಶ ಕೋರಿಶೆಟ್ಟಿ, ವಿನಯ ಶರ್ಮಾ, ಪ್ರಾಚಿ ಶರ್ಮಾ, ಲಕ್ಷ್ಮೀ ಭೋವಿ, ಲತಾ ಎನ್.ದಂಡೋತಿಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.