ಸತ್ಯ ಶುದ್ಧ ಸಮಾಜ ನಿರ್ಮಾಣವೇ ಶ್ರೀ ರೇಣುಕಾಚಾರ್ಯರ ಮೂಲ ಗುರಿ:ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರಗಿ,ಜ.5:ಹಸಿರು ಕ್ರಾಂತಿ ಮೊದಲ್ಗೊಂಡು ನೂರೆಂಟು ಕ್ರಿಯಾಶೀಲ ಕ್ರಾಂತಿಗೈದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂಲ ಗುರಿ ಸತ್ಯ ಶುದ್ಧ ಸಮಾಜ ನಿರ್ಮಾಣವಾಗಿತ್ತೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ತೆಲಂಗಾಣದ ಕೊಲನಪಾಕ ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ಗುರು ಭಕ್ತಿ ಇಲ್ಲದಾತನಿಗೆ ಶಿವಭಕ್ತಿ ಹುಟ್ಟದು. ಗುರು ಶಿವನಲ್ಲಿ ಸಮಾನ ಭಕ್ತಿ ಹೊಂದಿ ಪೂಜಿಸಿದರೆ ಸತ್ಫಲ ಪ್ರಾಪ್ತವಾಗುವುದು. ಜ್ಞಾನ ಸಾಧನೆಯ ಅರಿವುಳ್ಳ ಮನುಷ್ಯ ಶಿವಜ್ಞಾನ ಅರಿಯದಿದ್ದರೆ ಜೀವನ ವ್ಯರ್ಥ. ಶಿವನ ಸಾಕಾರ ಇನ್ನೊಂದು ರೂಪವೇ ಶ್ರೀ ಗುರು. ಗುರುವಿಲ್ಲದೇ ಬಾಳಿನಲ್ಲಿ ಭವ ಬಂಧನ ಹರಿಯದು. ಶಿವಜ್ಞಾನ ಸಿಗದು. ಆಣವಾದಿ ಮಲತ್ರಯಗಳನ್ನು ನಿವಾರಿಸಿ ಶಿವಜ್ಞಾನ ಉಂಟು ಮಾಡುವುದೇ ಗುರುವಿನ ಧರ್ಮವಾಗಿದೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತ ಸಿರಿಯನ್ನು ಬೋಧಿಸಿ ಉದ್ಧರಿಸಿದರೆಂದರು.
ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಚಂದನಕೇರಾ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿ ನಮನ ಸಲ್ಲಿಸಿದರು. ಬೆನಕನಹಳ್ಳಿ ವೀರಶಿವಲಿಂಗೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಶ್ರೀ ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಬೆಂಗಳೂರು ಎಸ್.ಜೆ.ಆರ್. ವಿದ್ಯಾ ಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಲ್ಮಠ, ವಾಸ್ತು ತಜ್ಞ ಶ್ರೀರಾಮಲು, ಅಣ್ಣಾರಾವ್ ಬಿರಾದಾರ, ಗುರುಪಾದಪ್ಪ ಕಿಳಗಿ, ಶಿವಶರಣಪ್ಪಾ ಸೀರಿ, ಹೈದರಾಬಾದಿನ ವೀರಮಲ್ಲೇಶ್ವರ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಪ್ರಾತ:ಕಾಲ ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ ಚಂಡಿಕಾಂಬಾ ದೇವಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ಕಲಬುರ್ಗಿಯ ಶಕ್ತಿ ಉಪಾಸಕ ಗಿರಿಯಪ್ಪ ಮುತ್ಯಾ ಆಗಮಿಸಿದ ಎಲ್ಲ ಸದ್ಭಕ್ತರಿಗೆ ಅನ್ನ ದಾಸೋಹ ಸೇವೆ ಸಲ್ಲಿಸಿದರು.