ಸತ್ಯ ಧರ್ಮ ನಂಬಿಕೆ ಅವಸಾನದ ಅಂಚಿಗೆ ಹೋಗುತ್ತಿದೆ:ಹೆಚ್.ಡಿ.ಕೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.11: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸತ್ಯ, ಧರ್ಮ, ನಂಬಿಕೆ ಎಂಬುದು ಅವಸಾನದ ಅಂಚಿಗೆ ಹೋಗುತ್ತಿರುವುದು ಕಳವಳಕಾರಿಯಾಗಿದ್ದು ಯುವಕರು ದೇವರ ಬಗ್ಗೆ ನಂಬಿಕೆ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೋಟೆ ರಂಗನಾಥಸ್ವಾಮಿ ವಿಮಾನ ಗೋಪುರ ಮತ್ತು ಗರುಡಗಂಭ ಪ್ರತಿಷ್ಟಾಪನಾ ಮತ್ತು ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿಮ್ಮಂಥ ಲಕ್ಷಾಂತರ ಕಾರ್ಯಕರ್ತರು ನೀಡುವ ಪ್ರೀತಿ, ಅಭಿಮಾನ, ಆಶೀರ್ವಾದದಿಂದ ನಾನು ಬದುಕಿದ್ದೇನೆ ಆ ಭಗವಂತನಲ್ಲಿ ಏನೋ ಶಕ್ತಿ ಇದೆ ಹಿಂದೆ ಬಸ್, ವಿದ್ಯುತ್, ಶಾಲೆಗಳ ಸೌಕರ್ಯ ಇರಲಿಲ್ಲ ಆದರೆ ಇಂದು ಎಲ್ಲಾ ಸೌಲಭ್ಯಗಳಿದ್ದರೂ ಜನರಲ್ಲಿ ಸತ್ಯ, ಧರ್ಮ ಎಂಬುದು ಅವಸಾನದ ಅಂಚಿನಲ್ಲಿದೆ ಆಗ ಹಳ್ಳಿಗಳಲ್ಲಿ ಜಗಳ, ಹೊಡೆದಾಟಗಳು ನಡೆಯುತ್ತಿರಲಿಲ್ಲ ಆದರೆ ಇಂದು ಎಲ್ಲದಕ್ಕೂ ವೈಮನಸ್ಸು, ಹೋರಾಟ ನಡೆಸಲಾಗುತ್ತಿದೆ ಇಂದಿನ ಯುವಕರು ಹಿರಿಯರಿಗೆ ಗೌರವ ನೀಡಬೇಕು ಸಮಾಜದಲ್ಲಿ ನೆಮ್ಮದಿಯ, ಸಹಬಾಳ್ವೆಯ ಜೀವನ ಸಾಗಿಸಬೇಕು ಕಳೆದ 2-3 ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ನನಗೆ ಬೇಸರ ತರಿಸಿದೆ. ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಸರ್ಕಾರವೂ ಬೆಂಬಲ ಬೆಲೆ ನೀಡುತ್ತಿಲ್ಲ. ರೈತರನ್ನು ಉಳಿಸುವ ಕೆಲಸಗಳನ್ನು ಸರ್ಕಾರ ಮಾಡುತ್ತಿಲ್ಲ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ನೀವೇ ಕಾಣಲಿದ್ದೀರಿ. ಅಕ್ಕಿಗೆ ಬೇಡಿಕೆ ಬರಲಿದ್ದು ನೀವು ಬೆಳೆದ ಭತ್ತವನ್ನು ತಕ್ಷಣವೇ ಮಾರಾಟ ಮಾಡಬೇಡಿ. ಸ್ವಲ್ಪದಿನ ಕಾಯಿರಿ ಉತ್ತಮ ಬೆಲೆ ದೊರೆಯಲಿದೆ ಗೃಹಲಕ್ಷ್ಮಿ ಹಣ ಇನ್ನೂ ಹಲವಾರು ಮಹಿಳೆಯರಿಗೆ ತಲುಪಿಲ್ಲ ಸರ್ಕಾರದಲ್ಲಿ ಹಣವಿಲ್ಲ ಅಭಿವೃದ್ಧಿಗೆ ಹಣ ನೀಡದೇ ಕೇವಲ ಬೂಟಾಟಿಕೆ ಆಡುತ್ತಿದ್ದಾರೆ ಎಂದರು.
ಪಂಚರತ್ನ ಕಾರ್ಯಕ್ರಮ ಉತ್ತಮವಾಗಿತ್ತು ಆದರೆ ಜನತೆ ನನ್ನನ್ನು ಕೈ ಹೊಡಿಯಲಿಲ್ಲ ನಾನು ಮುಖ್ಯಮಂತ್ರಿಯಾಗಿದ್ದರೆ ಕೊಬ್ಬರಿಗೆ ಇಪ್ಪತ್ತು ಸಾವಿರ ಬೆಲೆ ನೀಡುತ್ತಿದ್ದೆ ನಿಮ್ಮ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ ಯಾವುದೇ ಚುನಾವಣೆಯಲ್ಲಿ ನೀವೆಲ್ಲರೂ ಅಲ್ಪ ಆಸೆಗೆ ಬಲಿಯಾಗಿ ದುಷ್ಟರನ್ನು ಹಣ ಮಾಡುವವರನ್ನು ಆರಿಸಬೇಡಿ ಬದುಕಿರುವವರೆಗೆ ನಿಮ್ಮ ಋಣ ತೀರಿಸುವ ಕೆಲಸ ಮಾಡಲಿದ್ದೇನೆ ಒಮ್ಮೆ ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಒಮ್ಮೆ ಅವಕಾಶ ಮಾಡಿಕೊಟ್ಟರೆ ಉತ್ತಮ ಆಡಳಿತ ನೀಡಲಿದ್ದೇನೆ ಎಂದರು.
ಮೇ ನಂತರ ಸರ್ಕಾರ ಬಿಳಲಿದೆ:-
ರಾಜ್ಯದ ಅಭಿವೃದ್ದಿಗೆ ಹಣವನ್ನು ಹೊಂದಿಸಲು ಹರಸಾಹಸ ಪಡುತ್ತಿರುವ ಈ ಸರ್ಕಾರ ಲೋಕಸಭಾ ಚುನಾವಣೆಯ ನಂತರ ಖಂಡಿತವಾಗಿಯೂ ಬಿದ್ದುಹೋಗಲಿದೆ ಎಂದು ತಿಳಿಸಿದರು.
ಸಮುದಾಯಭವನ ನಿರ್ಮಿಸಲು ಅನುದಾನ.
ದೇವೇಗೌಡರ ಬಗ್ಗೆ ನೀವುಗಳು ಇಟ್ಟಿರುವ ಅಭಿಮಾನ, ಪ್ರೀತಿಗಾಗಿ ಈ ಭಗವಂತನ ಸನ್ನಿದಿಯಲ್ಲಿ ಸಮುದಾಯ ಭವನ ನಿರ್ಮಿಸಲು ರಾಜ್ಯಸಭಾ ಸದಸ್ಯರ ನಿಧಿಯಿಂದ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ಹಣ ಒದಗಿಸಲಾಗುವುದು ರಾಜ್ಯದ ರೈತರು ಎಷ್ಟೇ ಕಷ್ಟ ಇದ್ದರೂ ಆತ್ಮಹತ್ಯೆ ದಾರಿ ಹಿಡಿಯಬೇಡಿ ಎಂದು ಮನವಿ ಮಾಡಿದರು.
ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ವತಿಯಿಂದ ಮನವಿ.
ತಾಲ್ಲೂಕಿನಲ್ಲಿ ಹಾದುಹೋಗಿರುವ ಜಲಸೂರು-ಬೆಂಗಳೂರು ರಸ್ತೆಗೆ ಭೂಮಿ ಕಳೆದುಕೊಂಡ ರೈತರುಗಳಿಗೆ ಸಮರ್ಪಕ ಪರಿಹಾರ ನೀಡಿಲ್ಲ ಕೆಲವರಿಗೆ ಒಂದು ಗುಂಟೆಗೆ 14,000 ನೀಡಿದ್ದರೆ ಇನ್ನೊಬ್ಬರಿಗೆ 2,40,000 ರೂ ನೀಡಲಾಗಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ನ್ಯಾಯ ಒದಗಿಸಬೇಕು ಎಂದು ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗ ಮನವಿ ಸಲ್ಲಿಸಿದರು. ಹಾಗೆಯೇ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಸೇವಾಭದ್ರತೆ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು ಮನವಿ ಸಲ್ಲಿಸಲಾಯಿತು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ಒಬ್ಬ ಸಾಮಾನ್ಯ ರೈತನ ಮಗನನ್ನು ಶಾಸಕ ಸ್ಥಾನಕ್ಕೆ ಏರುವಂತೆ ಮಾಡಿದ್ದಾರೆ ನಾನು ಅವರಿಗೆ ಆಭಾರಿಯಾಗಿದ್ದೇನೆ ಅವರು ಹಾಕಿದ ಗೆರೆಯನ್ನು ದಾಟದೇ ಕೆಲಸ ಮಾಡುತ್ತೇನೆ ನಮ್ಮ ತಾಲ್ಲೂಕು ಅಭಿವೃದ್ಧಿ ಕಾಣದೇ ಹಿಂದುಳಿದಿದೆ ಈ ಹಿಂದೆ ಕುಮಾರಣ್ಣ ಕೊಟ್ಟ ಅನುದಾನ ಬಳಸದೇ ವಾಪಸ್ ಹೋಗಿದೆ ಕುಮಾರಣ್ಣನವರ ಕಾರ್ಯಕ್ರಮಗಳು ಜನರಿಗೆ ಧೀರ್ಘಕಾಲದ ಉಪಯೋಗ ನೀಡುವ ಕಾರ್ಯಕ್ರಮಗಳಾಗಿದ್ದವು ಆದರೆ ಗ್ಯಾರಂಟಿ ಆಸೆಗೆ ಮರುಳಾದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮರುಳಾದರು ಅದರ ಪ್ರತಿಫಲವನ್ನು ಜನತೆ ಈಗ ಅನುಭವಿಸುತ್ತಿದ್ದಾರೆ ಕುಮಾರಣ್ಣನಿಗೆ ಮುಂದೆ ಉತ್ತಮ ಅವಕಾಶಗಳು ಸಿಗಲಿ ಎಂದರು.
ಕಾರ್ಯಕ್ರಮದಲ್ಲಿ ಮನ್ ಮುಲ್ ನಿರ್ದೇಶಕ ಡಾಲುರವಿ, ಪ್ರಥಮದರ್ಜೆ ಗುತ್ತಿಗೆದಾರ ಎ.ಆರ್.ರಘು, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಮಾತನಾಡಿದರು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್, ಸೇರಿದಂತೆ ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.