ಸತ್ಯಪ್ರಮೋದ ತೀರ್ಥರ ಮಹಿಮೆ ಅಪಾರ

ಕೆಂಭಾವಿ:ಅ.29: ಸತತ 50 ವರ್ಷಗಳ ಕಾಲ ಉತ್ತರಾದಿ ಮಠದ ಪೀಠವನ್ನೇರಿದ ಶ್ರೀ ಸತ್ಯಪ್ರಮೋದ ತೀರ್ಥರ ಮಹಿಮೆ ಅಪಾರವಾಗಿದೆ ಎಂದು ಕಲಬುರಗಿಯ ಪಂ. ಶ್ರೀ ಗೋಪಾಲಾಚಾರ್ಯ ಅಕಮಂಚಿ ಹೇಳಿದರು.

ಪಟ್ಟಣದ ಉತ್ತರಾದಿ ಮಠದಲ್ಲಿ ಗುರುವಾರ ನಡೆದ ಶ್ರೀ ಸತ್ಯಪ್ರಮೋದ ತೀರ್ಥರ 25ನೇ ವರ್ಷದ ಉತ್ತರ ಆರಾಧನಾ ಮಹೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜ್ಞಾನದ ಖಣಿ ಎಂದೆ ಕರೆಯಲ್ಪಡುತ್ತಿದ್ದ ಶ್ರೀ ಸತ್ಯಪ್ರಮೋದರು ದೇಶದ ಉದ್ದಗಲಕ್ಕೂ ವಿಶಿಷ್ಠ ತತ್ವಜ್ಞಾನದ ಮೂಲಕ ಪ್ರತಿಯೊಬ್ಬರಲ್ಲಿ ಆಸ್ತಿಕ ಭಾವನೆ ಬಿತ್ತಿ ಜ್ಞಾನದ ರಸದೌತಣವನ್ನು ಉಣಬಡಿಸಿದ ಮಹಾನ್ ಯತಿಗಳು ಎಂದು ಬಣ್ಣಿಸಿದರು.

ಸತತ 50 ವರ್ಷಗಳ ಕಾಲ ನಿರಂತರವಾಗಿ ಶ್ರೀರಾಮ ದೇವರ ಸೇವೆ ಮಾಡಿ ಅನೇಕ ವಿದ್ವಾಂಸರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಪರಮ ಗುರುಗಳು ನಮ್ಮ ಸತ್ಯಪ್ರಮೋದರು ಎಂದು ಹೇಳಿದರು. ಮಧ್ಯಾರಾನೆ ದಿನವಾದ ಶುಕ್ರವಾರ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಮಹಾ ಪ್ರಾಚಾರ್ಯ ಪಂ. ಶ್ರೀ ಪ್ರಮೋದಾಚಾರ್ಯ ಪೂಜಾರ ಉಪನ್ಯಾಸ ನೀಡಿ ಶ್ರೀ ಸತ್ಯಪ್ರಮೋದ ತೀರ್ಥರ ಮಹಿಮೆಗಳನ್ನು ತಿಳಿಸಿದರು. ಪಂ. ಶ್ರೀ ಹರೇರಾಮಾಚಾರ್ಯ ಪಾಲ್ಮೂರ ವಿಶೇಷ ಉಪನ್ಯಾಸ ನೀಡಿದರು.

ಸಂಜೆ ಕಲಬುರಗಿಯ ಖ್ಯಾತ ಸಂಗೀತಗಾರ ರಮೇಶ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಬಸವರಾಜ ಭಂಟನೂರ ಹಾರ್ಮೋನಿಯಂ, ಯಮುನೇಶ ಯಾಳಗಿ ಹಾಗೂ ವಾದಿರಾಜ ಕುಲಕರ್ಣಿ ತಬಲಾ, ರವೀಂದ್ರ ದೇಸಾಯಿ ಪಖ್ವಾಜ್, ಪವನ ಕುಲಕರ್ಣಿ ತಾನಪೂರ, ಹಳ್ಳೇರಾವ ಚನ್ನೂರ ತಾಳ ಸಾಥ್ ನೀಡಿದರು.

ಗುರುಗಳ 25ನೇ ವರ್ಷದ ಆರಾಧನೆ ಅಂಗವಾಗಿ ಮಠವನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಧ್ವಜಾರೋಹಣ ನಂತರ ಪ್ರಭೋದೋತ್ಸವ, ವಿಷ್ಣು ಸಹಸ್ರ ನಾಮ, ಸುಂದರಕಾಂಡ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ, ಅಭಿಷೇಕ, ಗುರುಗಳ ವೃಂದಾವನಕ್ಕೆ ವಿಶೇಷ ಅಲಂಕಾರ, ಶುಕ್ರವಾರ ಮಹಾರಥೋತ್ಸವ, ಪಲ್ಲಕ್ಕಿ ಸೇವೆ, ತೀರ್ಥ ಪ್ರಸಾದ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮೋಹನರಾವ ಕುಲಕರ್ಣಿ ಹಾಗೂ ನರಸಿಂಹರಾವ ಕುಲಕರ್ಣಿ ಅನ್ನ ಸಂತರ್ಪಣೆ ನೆರವೇರಿಸಿದರು. ಜಯಸತ್ಯಪ್ರಮೋದ ಸೇವಾ ಸಂಘ, ಶ್ರೀ ಸತ್ಯಪ್ರಮೋದ ಯುವ ಸೇನೆ, ಶ್ರೀ ರಘೂತ್ತಮ ಭಜನಾ ಮಂಡಳಿ, ಪ್ರಮೋದಿನ ಮಹಿಳಾ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಹಲವು ಭಕ್ತರು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.