ಸತ್ಯದ ಆಚರಣೆಗೆ ಮುಂದಾಗಿ

ಬೀದರ್: ಆ.3:ಪ್ರತಿಯೊಬ್ಬರೂ ಸತ್ಯದ ಆಚರಣೆಗೆ ಮುಂದಾಗಬೇಕು ಎಂದು ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ರಮೇಶ ಮಠಪತಿ ಹೇಳಿದರು.

ಇಲ್ಲಿಯ ಲಿಂಗಾಯತ ಸಮೃದ್ಧಿ ಸಹಕಾರ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲ್ಲು ನಾಗರಕ್ಕೆ ಹಾಲೆರೆಯುವ ಬದಲು ಹಸಿದವರಿಗೆ ಹಾಲು ಕೊಡುವುದೇ ಶ್ರೇಷ್ಠ. ಆತ್ಮಸಾಕ್ಷಿಯೇ ದೇವರು. ಹೀಗಾಗಿ ಆತ್ಮಸಾಕ್ಷಿ ಒಪ್ಪುವಂತಹ ಕೆಲಸ ಮಾಡಬೇಕು ಎಂದು ನುಡಿದರು.

ಮೂಢನಂಬಿಕೆ, ಮೂಢ ಆಚರಣೆಗಳನ್ನು ಕಿತ್ತೆಸೆದು ಸರ್ವಾಂಗ ಸುಂದರ, ಸರ್ವ ಸಮಾನತೆಯ ಸಮಾಜ ನಿರ್ಮಿಸುವುದೇ ಬಸವ ಪಂಚಮಿ ಆಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಸವ ಪೂರ್ವದ ದಾರ್ಶನಿಕರು ದೇವರ ಬಗ್ಗೆ ಮಾತನಾಡಿದ್ದರು. ಆದರೆ, ಮನುಷ್ಯರ ಕುರಿತು ಮಾತನಾಡಿದ ಮೊಟ್ಟ ಮೊದಲ ದಾರ್ಶನಿಕ ಬಸವಣ್ಣ. ಮೌಢ್ಯ ರಹಿತ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು ಎಂದು ಹೇಳಿದರು.

ಬಸವಣ್ಣನವರ ವಚನಗಳ ಹೆಚ್ಚು ಹೆಚ್ಚು ಪ್ರಚಾರದಿಂದ ಅರಿವಿನ ಜ್ಯೋತಿ ಬೆಳಗಲಿದೆ ಎಂದು ಶ್ರೀ ಬಸವೇಶ್ವರ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ತಿಳಿಸಿದರು.

ಬಸವಣ್ಣನವರ ಲಿಂಗೈಕ್ಯ ದಿನವಾದ ಶ್ರಾವಣ ಶುದ್ಧ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಆಡಳಿತಾಧಿಕಾರಿ ಅಶೋಕ ಎಲಿ ಹೇಳಿದರು.

ಅಣವೀರ ಕೊಡಂಬಲ ಅಧ್ಯಕ್ಷತೆ ವಹಿಸಿದ್ದರು. ಸಿ.ಎಸ್. ಗಣಾಚಾರಿ, ಬಸವರಾಜ ಶೇರಿಕಾರ್ ಇದ್ದರು. ವೈಜಿನಾಥ ಹುಣಸಗೇರಿ ನಿರೂಪಿಸಿದರು.

ಪ್ರಾರಂಭದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ, ವಚನ ಪಠಣ ನೆರವೇರಿತು.