ಸತ್ಪುರುಷರ ಸಹವಾಸದಿಂದ ಜೀವನ ಸಾರ್ಥಕ

ಬೀದರ್ :ಮಾ.4:ಸತ್ಪುರುಷರ, ಸದ್ಗುರುಗಳ ಸನ್ನಿಧಿಯಲ್ಲಿ ಕಾಲ ಕಳೆಯುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಬೀದರ್ ತಾಲೂಕಿನ ಯರನಳ್ಳಿ ಗ್ರಾಮದಲ್ಲಿ ಅಭಿನವ ಬಾಲಯೋಗಿ ಶಂಕರಲಿಂಗ ಮಹಾರಾಜರ ಸಾನಿಧ್ಯದಲ್ಲಿ ಸದ್ಗುರು ದತ್ತ ದಿಗಂಬರ ಮಾಣಿಕೇಶ್ವರ ರಥ ನಿರ್ಮಾಣ ನಿಮಿತ್ತ ನಡೆದ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೂರ್ಣಕುಂಭ ಹೊತ್ತ ಮಹಿಳೆಯರ ಉಡಿ ತುಂಬಿರುವುದು ಮಾದರಿಯಾಗಿದೆ. ಸಂಕಲ್ಪ ಕೈಗೊಳ್ಳುವಾಗ ಅನ್ನ ಕೊಡುವ ರೈತರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿರುವುದು ಅನುಕರಣೀಯ. ನೆರವು ನೀಡಿದವರನ್ನು ನೆನಪು ಮಾಡಿಕೊಂಡು ಕೃತಜ್ಞತೆ ಸಲ್ಲಿಸುವ ಮನಸ್ಸು ಇರಬೇಕು ಎಂದು ಸೂರ್ಯಕಾಂತ್ ಹೇಳಿದರು.

ಸಂಪತ್ತು ಎಂದರೆ ಬರೀ ದುಡ್ಡು ಅಲ್ಲ, ಪ್ರೀತಿಯ ಸಂಪತ್ತು ಇರಬೇಕು. ವಿಶ್ವಾಸದ ಸಂಪತ್ತು ಇರಬೇಕು. ಉತ್ತಮ ಮನಸ್ಸು ಇರಬೇಕು. ಇವೆಲ್ಲವೂ ಇದ್ದ ಕಡೆಯೇ ಮಹಾಲಕ್ಷ್ಮೀ ವಾಸ ಮಾಡುತ್ತಾಳೆ ಎಂದು ಸೂರ್ಯಕಾಂತ್ ಹೇಳಿದರು.

ಅಧಿಕಾರ ಇಲ್ಲದಿದ್ದರೂ ಜನ ಸೇವೆಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇನೆ. 14 ವರ್ಷಗಳಿಂದ ಈ ಸೇವೆ ಮುಂದುವರೆಸಿದ್ದೇನೆ. ಈ ಬಾರಿ ಬೀದರ್ ಉತ್ತರ ಕ್ಷೇತ್ರದ ಮತದಾರರು ಗೆಲ್ಲಿಸುವ ವಿಶ್ವಾಸ ಇದೆ ಎಂದು ಸೂರ್ಯಕಾಂತ್ ಹೇಳಿದರು.

ಗ್ರಾಮದಲ್ಲಿನ ದೇವಸ್ಥಾನ ನಿರ್ಮಾಣಕ್ಕೆ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ನೆರವು ನೀಡಿದ್ದರು. ನಾನೂ ಪರೋಪಕಾರಿ, ಧಾರ್ಮಿಕ, ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದ್ದೇನೆ. ವಿಧಾನಸಭಾ ಚುನಾವಣೆಯಲಿ ಜನ ಆಶಿರ್ವಾದಿಸಬೇಕು. ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಜನ ಸೇವೆ ಮಾಡುವ ಅವಕಾಶ ನೀಡಬೇಕು ಎಂದು ಕೋರಿದರು.

ಯರನಳ್ಳಿ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಸರಕಾರದ ಯೋಜನೆಗಳನು ತಲುಪಿಸುವ ಕಾರ್ಯ ನಡೆದಿದೆ. ಈಚೆಗೆ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಈ ಗ್ರಾಮಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಮಂಜೂರಾತಿ ಪತ್ರಗಳನ್ನು ವಿತರಿಸಿದ್ದಾರೆ. ಆಯುಷ್ಮಾನ ಯೋಜನೆಯ ಕಾರ್ಡ್‍ಗಳನ್ನು ಜನರಿಗೆ ತಲುಪಿಸಲಾಗಿದೆ ಎಂದು ಸೂರ್ಯಕಾಂತ್ ಹೇಳಿದರು.

ಪ್ರಮುಖರಾದ ಮಹೇಶ ದೇಶಮುಖ್, ಮಲ್ಲಿಕಾರ್ಜುನ ಕಾರಬಾರಿ, ವಿಜಯಕುಮಾರ ಅಂಕಲೆ, ಪೀರಪ್ಪ ಔರಾದೆ, ಸಂಜು ಸಿದ್ದಾಪುರೆ, ಸುನೀಲ ಶಿವಶೆಟ್ಟಿ, ಆಕಾಶ್ ಚಿಕಪೇಟೆ ಮತ್ತಿತರ ಗಣ್ಯರು ಇದ್ದರು.