ಸತ್ತಿದ್ದ ಹುಲಿ, ಚಿರತೆ ಹೂತಿಟ್ಟಿದ್ದು ಆರ್‍ಎಫ್‍ಓ, ನೌಕರರು ಬಲಿಪಶು

ಚಾಮರಾಜನಗರ, ಜೂ.17- ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಮೃತಪಟ್ಟಿದ್ದ ಹುಲಿ ಹಾಗೂ ಚಿರತೆಯನ್ನು ಬಂಡೀಪುರದ ಮೊಳೆಯೂರು ವಲಯದ ಆರ್‍ಎಫ್‍ಒ ಪುಟ್ಟರಾಜು ಗುಟ್ಟಾಗಿ ಹೂತಿದ್ದಾರೆ ಎಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಗಂಭೀರ ಆರೋಪ ಮಾಡಿದ್ದಾರೆ.
ಉರುಳಿಗೆ ಸಿಕ್ಕಿಬಿದ್ದಿದ್ದ ಹುಲಿ ಮತ್ತು ಅಂಗಚ್ಛೇಧಗೊಂಡ ಚಿರತೆಯ ಶವವನ್ನು ಮೊಳೆಯೂರು ಆರ್‍ಎಫ್‍ಒ ಪುಟ್ಟರಾಜು ಗುಟ್ಟಾಗಿ ಹೂತಿಟ್ಟಿದ್ದರು. ಈ ವಿಚಾರ ನಮ್ಮ ಗಮನಕ್ಕೆ ಬದಲಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೆ. ಜೊತೆಗೆ, 2022 ರ ನವೆಂಬರ್ ನಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಕೂಡ ಬರೆಯಲಾಗಿದ್ದರೂ ತನಿಖೆ ಮಾತ್ರ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಭಾರತದ ಪ್ರಮುಖ ವನ್ಯಜೀವಿಗಳಾದ ಹುಲಿ ಮತ್ತು ಚಿರತೆಯ ಶವಗಳನ್ನು ರಹಸ್ಯವಾಗಿ ಹೂಳುವಲ್ಲಿ ಭಾಗಿಯಾಗಿರುವ ಎಲ್ಲರ ವಿವರಗಳನ್ನು ನಾವು ಒದಗಿಸಿದ್ದೇವೆ.
ಚಿರತೆಯ ತಲೆ ಮತ್ತು ಪಾದಗಳನ್ನು ಕಳ್ಳ ಬೇಟೆಗಾರರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದ್ದು ಅರಣ್ಯ ವೀಕ್ಷಕರು ಮಾತ್ರ ಘಟನೆಯ ಬಲಿಪಶುಗಳಾಗಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಹುಲಿ ಮತ್ತು ಚಿರತೆಯ ರಹಸ್ಯವಾಗಿ ಹೂತಿದ್ದ ಮಾಹಿತಿ ಹೊರ ಬರುತ್ತಿದ್ದಂತೆ ಘಟನೆಯ ಸಾಕ್ಷಿಗಳಾಗಿದ್ದ ಅರಣ್ಯ ವೀಕ್ಷಕರನ್ನು ಆರ್‍ಎಫ್‍ಒ ಪುಟ್ಟರಾಜು ಕೆಲಸದಿಂದ ವಜಾಗೊಳಿಸಿದ್ದಾರೆ. ಕಳ್ಳತನದ ಆರೋಪ ಹೊರಿಸಿ 6 ಮಂದಿಯನ್ನು ವಜಾ ಮಾಡಿದ್ದು ಕಾಡು ಕಾಯುವವರಿಗೆ ಅಧಿಕಾರಿಗಳು ಬಲಿಪಶು ಮಾಡಿದ್ದಾರೆ ಎಂದು ಕಿಡಿಕಾರಿದರು.
ಘಟನೆ ಸಂಕ್ಷಿಪ್ತ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮೊಳೆಯೂರು ವಲಯದಲ್ಲಿ 2019-20 ರಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಹುಲಿ, ಬೇಟೆಗಾರರು ಕೊಂದಿದ್ದ ಚಿರತೆಯನ್ನು ಅಲ್ಲಿನ ಆರ್‍ಎಫ್‍ಓ ಮೇಲಾಧಿಕಾರಿಗಳ ಗಮನಕ್ಕೆ ತರದೇ ರಹಸ್ಯವಾಗಿ ವಿಲೇವಾರಿ ಮಾಡಿದ್ದಾರೆ. ಜೊತೆಗೆ, ಘಟನೆಗೆ ಸಾಕ್ಷಿಯಾಗಿದ್ದ 6 ಮಂದಿ ಅರಣ್ಯ ವೀಕ್ಷಕರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬುದು ಹೂವರ್ ಆರೋಪ.
ಆರ್‍ಎಫ್‍ಓಪುಟ್ಟರಾಜು ಮತ್ತು ನಮ್ಮನ್ನು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ಸರ್ಕಾರ ಹೊರತೆಗೆಯಬೇಕು.
ಹುಲಿ ಮತ್ತು ಚಿರತೆ ಶವಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಿದ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು, ಆರ್‍ಎಫ್‍ಒ ಅವರು ಹುಲಿ ಮತ್ತು ಚಿರತೆಯ ಶವವನ್ನು ರಹಸ್ಯವಾಗಿ ಹೂಳದಿರುವುದು ಸಾಬೀತಾದಾರೇ ನಾನು ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸುತ್ತೇನೆ ಎಂದು ಸವಾಲು ಎಸೆದಿದ್ದಾರೆ ಹೂವರ್.