
ಬಾಳೆಹೊನ್ನೂರು.ಮಾ.೪; ಬದುಕಿ ಬಾಳುವ ಮನುಷ್ಯನಿಗೆ ಭಗವಂತ ಅಮೂಲ್ಯ ಸಂಪನ್ಮೂಲಗಳನ್ನು ಕೊಟ್ಟಿದ್ದಾರೆ. ಅರಿತು ಆಚರಿಸಿ ಬಾಳುವುದು ಮನುಷ್ಯನ ಗುಣಧರ್ಮವಾಗಬೇಕು. ಸತ್ಕಾರ್ಯಗಳನ್ನು ಮಾಡುವುದರ ಮೂಲಕ ಸತ್ಫಲಗಳನ್ನು ಪಡೆಯಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ಹರಿದ್ರಾ ಲೇಪನ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.ತಿದ್ದದೆ ತೀಡದೇ ಅಂದ ಕಾಣದು ಗೊಂಬೆ. ಬಿತ್ತದೆ ಕೆತ್ತದೆ ಬೆಳೆ ಬೆಳೆಯದು ಭೂಮಿ. ನಿಂದನೆ ನೋವಿಗೆ ಅಳುಕಿದರೆ ಬದುಕು ರೂಪಗೊಳ್ಳದು. ನೊಂದರೂ ಬೆಂದರೂ ಬದುಕು ಸಾಗಲೇಬೇಕು. ಅತಿಯಾಗಿ ಚಿಂತಿಸದೇ ಅರಿವಿನ ದಾರಿಯಲ್ಲಿ ನಡೆಯುವುದೇ ಮನುಷ್ಯನ ಗುರಿಯಾಗಬೇಕು. ಕಾಲೆಳೆಯುವುವರು ಎಷ್ಟಿದ್ದರೂ ಕೈ ಹಿಡಿದು ಮೇಲೆತ್ತುವ ಭಗವಂತ ಒಬ್ಬನಿದ್ದಾನೆ ಎಂಬ ನಂಬಿಕೆಯಿರಲಿ. ಸೋರುವ ಮನೆಯಲ್ಲಿದ್ದರೂ ಪರವಾಗಿಲ್ಲ. ಎಲ್ಲರನ್ನು ಸೇರುವ ಮನಸ್ಸಿರಬೇಕು. ಬೆಳಕಿನ ಬೆಲೆ ಕತ್ತಲಲ್ಲಿ ತಿಳಿಯಲು ಸಾಧ್ಯ. ಸತ್ಯವಂತರ ಧರ್ಮವಂತರ ನಿಲುವು ತಿಳಿಯುವುದು ಕಷ್ಟ ಕಾಲದಲ್ಲಿ ಎಂಬುದನ್ನು ಮರೆಯಬಾರದು. ವಿಧಿಯ ಮುಂದೆ ದುಡ್ಡು ದೊಡ್ಡಸ್ತಿಕೆ ಏನೂ ನಡೆಯುವುದಿಲ್ಲ. ಹಣೆ ಬರಹ ಮೀರಿ ನಡೆಯಲಾಗದು. ದೇವರು ಏನೆಲ್ಲವನ್ನು ಕೊಟ್ಟಿದ್ದರೂ ಅದು ನಮ್ಮದಲ್ಲ. ಜೀವನದಲ್ಲಿ ಶಾಶ್ವತವಾಗಿರುವುದು ಯಾವುದೂ ಇಲ್ಲ. ಬದುಕಿರುವಷ್ಟು ದಿನ ಭಗವಂತನಲ್ಲಿ ಭಕ್ತಿ ಶ್ರದ್ಧೆಯಿಂದ ಬಾಳಿ ಬದುಕು ಕಟ್ಟಿಕೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ ಎಂದರು.