ಸತ್ಕಾರ್ಯಗಳಿಂದ ಬದುಕು ಬಲಾಢ್ಯ : ರಂಭಾಪುರಿ ಶ್ರೀ

 ಬಾಳೆಹೊನ್ನೂರು.ಅ.೩೦; ಅಕ್ಟೋಬರ್-28.ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಸತ್ಕಾರ್ಯಗಳ ಮೂಲಕ ನಮ್ಮ ಬಾಳ ಬದುಕನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಪೂರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮಾತು ಒಂದುಗೂಡಿಸಬೇಕೇ ಹೊರತು ಒಡೆಯಬಾರದು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ಧರ್ಮದ ಕೆಲಸವಾಗಬೇಕಾಗಿದೆ. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲದಿದ್ದರೂ ಬದುಕು ನಮ್ಮ ಕೈಯಲ್ಲಿದೆ. ಅಂತರAಗ ಬಹಿರಂಗ ಶುದ್ಧಿಗೆ ಮನುಷ್ಯ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಮನದ ಮಧ್ಯೆ ನಿರ್ಮಾಣಗೊಂಡ ಸ್ವಾರ್ಥದ ಗೋಡೆಯನ್ನು ದಾಟುವುದು ಕಷ್ಟವೆಂದು ಮಹಾತ್ಮರು ಎಚ್ಚರಿಸಿದ್ದಾರೆ. ಒಳ್ಳೆಯದಕ್ಕಿಂತ ಕೆಟ್ಟದ್ದು ಬಹುಬೇಗ ಬೆಳೆಯುತ್ತದೆ. ಅಷ್ಟೇ ಬೇಗ ನಾಶವಾಗುತ್ತದೆ. ಬಹಳಷ್ಟು ಜನ ಬಹಳಷ್ಟು ಗ್ರಂಥಗಳನ್ನು ಓದಬಹುದು. ಓದಿ ಎಷ್ಟೋ ಒಳ್ಳೆಯ ಮಾತುಗಳನ್ನು ಆಡಬಹುದು. ಆದರೆ ಬದುಕಿನಲ್ಲಿ ಅದರಂತೆ ನಡೆದುಕೊಳ್ಳದಿದ್ದರೆ ಯಾವ ಪ್ರಯೋಜನವು ಇಲ್ಲವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಪ್ರತಿಪಾದಿಸಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ದೇವಮಲ್ಲಮ್ಮನ ತ್ಯಾಗ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ನಾಗರಾಳಮಠ, ಹಾನಗಲ್ಲಿನ ಡಾ.ವಿಶ್ವನಾಥ ಪುರಾಣಿಕಮಠ, ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಶ್ರೀ ಪೀಠದ ಲೆಕ್ಕಾಧಿಕಾರಿ ಸಂಕಪ್ಪನವರ, ಹರಪನಹಳ್ಳಿ ಕೊಟ್ರೇಶಪ್ಪ, ಗುರುಕುಲದ ಪ್ರಾಚಾರ್ಯ ಸಿದ್ಧಲಿಂಗಯ್ಯ, ಗುರುಕುಲದ ಎಲ್ಲ ಸಾಧಕರು ಉಪಸ್ಥಿತರಿದ್ದರು.ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು. ದಾನಯ್ಯ ದೇವರು ನಿರೂಪಣೆ ಮಾಡಿದರು.ಪ್ರಾತ:ಕಾಲದಲ್ಲಿ ಸೀಗೆ ಹುಣ್ಣಿಮೆ ನಿಮಿತ್ಯ ಭೂಮಿ ತಾಯಿಗೆ ಹಾಲು ತುಪ್ಪವನೆರೆದು ಪೂಜೆ ಸಲ್ಲಿಸಿ ನಂತರ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.