ಸತೀಶ್ ಜಾರಿಕಿಹೋಳಿ ಬೆಂಬಲಿಗರಿಂದ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ: ಬಿಜೆಪಿ ರೈತ ಮೋರ್ಚಾ ಖಂಡನೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ನ, 13. ಇತ್ತೀಚೆಗೆ ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರು ಕಲ್ಲೋಳ್ಳಿಗೆ ಕಾರಿನಲ್ಲಿ ಹೋಗುತ್ತಿರುವ ವೇಳೆ ಕಾರನ್ನು ಅಡ್ಡಗಟ್ಟಿದ ಸತೀಶ್ ಜಾರಕಿಹೋಳಿಯವರ ಬೆಂಬಲಿಗರ ಕೃತ್ಯವನ್ನು ಸ್ಥಳೀಯ ಬಿಜೆಪಿ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. ಇಂದು ಗ್ರಾಮದ ರೈತ ಉತ್ಪಾದನಾ ಕೇಂದ್ರದ ಹತ್ತಿರ ಬಳ್ಳಾರಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗುಂಡಿಗನೂರು ಪ್ರಕಾಶಗೌಡ ಇವರ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಬಿಜೆಪಿ ಮುಖಂಡರು ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಪ್ರಕಾಶಗೌಡ ಕರ್ನಾಟಕ ಬಿಜೆಪಿ ಮಾದ್ಯಮ ಸಂಚಾಲಕ ಕರುಣಾಕರ ಖಾಸಲೆ ಇವರು ಹೊರಡಿಸಿದ ಪ್ರಕಟಣೆ ಪ್ರತಿಯನ್ನು ಓದಿ ಹೇಳಿದರು. ಪ್ರತಿಯಲ್ಲಿ ಈರಣ್ಣ ಕಡಾಡಿಯವರ ಕಾರನ್ನು ಅಡ್ಡಗಟ್ಟಿದ ಸತೀಶ್ ಜಾರಕಿಹೋಳಿಯ ಗೂಂಡಾಗಳು ಬಿಜೆಪಿಯ ವಿರುದ್ಧ ಘೋಷಣೆ ಕೂಗುತ್ತಾ ಈರಣ್ಣ ಕಡಾಡಿ ಮೇಲೆ ಹಲ್ಲೆಗೂ ಮುಂದಾಗಿದ್ದರು. ಇದು ರಾಜ್ಯದ ಜವಾಬ್ದಾರಿಯುತ ವ್ಯಕ್ತಿಯ ಮೇಲೆ ನಡೆದ ದೌರ್ಜನ್ಯ ಇದು ಖಂಡನೀಯವೆಂದು ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ತಿಳಿಸಿದ್ದಾರೆ.
     ಈರೀತಿಯ ದುಷ್ಕೃತ್ಯದ ಹಿಂದಿರುವ ಸತೀಶ್ ಜಾರಕಿಹೋಳಿಗೆ ಶೋಭೆ ತರುವಂತಹದಲ್ಲ. ದಲಿತ ಸಂಘಟನೆಗಳ ಹೆಸರಿನಲ್ಲಿ ಬ್ರಷ್ಟಾಚಾರ ಉಸಿರಾಗಿಸಿಕೊಂಡ, ವಿಚಾರವಾದಿ ಎಂಬ ಮುಖವಾಡದ, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಲ್ಲದಿರುವ ಇವರು ಮುಗ್ದ ಈ ಕೃತ್ಯದ ಮೂಲಕ ದಲಿತರಿಗೆ ಮಾಡಿದ ಅವಮಾನವಾಗಿದೆ ಎಂದು ತಿಳಿಸಲಾಗಿದೆ. ಇದೇವೇಳೆ ಘಟನೆಯಲ್ಲಿ ನೇರವಾಗಿ ಸತೀಶ್‍ರವರು ಇಲ್ಲ. ಗೂಬೆ ಕೂರಿಸುವ ಯತ್ನ ಬಿಜೆಪಿ ಪಕ್ಷ ಮಾಡುತ್ತಿದೆಯೇ ಮತ್ತು ನನ್ನ ವೈಯುಕ್ತಿಕ ಹೇಳಿಕೆಯಲ್ಲ ದಾಖಲೆಗಳ ಪ್ರಕಾರ ಇತರೆ ಭಾಷೆಯಲ್ಲಿರುವ ಅರ್ಥವನ್ನು ತಿಳಿಸಿದ್ದೇನೆಂದ ಸತೀಶ್‍ರವರ ಸಮರ್ಥನೆಗೆ ಸೇಡು ತೀರಿಸಿಕೊಳ್ಳುವ ಯತ್ನವೇ ಎಂದು ಪ್ರಶ್ನಿಸಿದಾಗ, ದಲಿತರು ಅಮಾಯಕರು ಅವರನ್ನು ಈ ಪ್ರಭಾವಿ ವ್ಯಕ್ತಿ ಬಳಸಿಕೊಳ್ಳದ ಹೊರತು ಇಂತ ಕೃತ್ಯ ನಡೆಯುವುದಿಲ್ಲ. ಒಂದುವೇಳೆ ದಾಖಲೆ ಇದ್ದರೆ ಅದನ್ನು ಬಹಿರಂಗಪಡಿಸಿ ಚರ್ಚಿಸಬಹುದಿತ್ತು ಎಂದು ಮುಖಂಡರು ಉತ್ತರಿಸಿದರು. ಕೊನೆಗೆ ಈ ಕುರಿತು ಸತೀಶ್ ಜಾರಕಿಹೋಳಿಯವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷದಿಂದ ಜಿಲ್ಲಾಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗುಂಡಿಗನೂರು ಪ್ರಕಾಶಗೌಡ, ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರಾದ ಎಸ್.ಎಂ.ಅಡಿವೆಯ್ಯಸ್ವಾಮಿ, ಜೆ.ಮಲ್ಲಿಕಾರ್ಜುನಗೌಡ, ಹಾಗಲೂರು ಮಲ್ಲನಗೌಡ, ಬಿ.ವೀರಭದ್ರಗೌಡ, ಯಲ್ಲನಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.