ಸತೀಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಒತ್ತಾಯ

ದಾವಣಗೆರೆ. ಮೇ.೧೫; ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಸತೀಶ್ ಜಾರಕಿಹೊಳಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಪ್ರೊ.ಎ.ಬಿ ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಕರ್ನಾಟಕದಲ್ಲಿ ರಾಜಕೀಯ ಅಧಿಕಾರ ಸಂವಿಧಾನ ಪರವಾದ ಕಾಂಗ್ರೆಸ್‌ ಪಕ್ಷಕ್ಕೆ ದೊರೆತಿರುವುದನ್ನು ಮಾನವ ಬಂಧುತ್ವ ವೇದಿಕೆ ಸ್ವಾಗತಿಸುತ್ತದೆ. ಈ ಬಾರಿ ಎಲ್ಲಾ ಸಮುದಾಯಗಳು ಬಹುತೇಕ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿರುವುದು ಸ್ವಾಗತರ್ಹವಾದದ್ದು, ಮುಖ್ಯವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೇಸ್ಸಿಗೆ ಈ ಬಾರಿ ಶಕ್ತಿ ನೀಡಿದೆ. ಮೀಸಲು ಕ್ಷೇತ್ರಗಳಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷದವರೆ ಆಯ್ಕೆಯಾಗಿದ್ದಾರೆ. ಎಸ್.ಟಿ. ಮೀಸಲು ಕ್ಷೇತ್ರದಲ್ಲಿ 15 ಜನರು ಆಯ್ಕೆಯಾಗಿದ್ದಾರೆ. ಎಸ್‌ಸಿ. ಮೀಸಲು ಕ್ಷೇತ್ರದಲ್ಲಿ 22 ಜನರು ಆಯ್ಕೆಯಾಗಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಈ ಬಾರಿಯ ಯಶಸ್ವಿ ಫಲಿತಾಂಶಕ್ಕೆ ಕಾರಣೀಭೂತರಲ್ಲಿ ಒಬ್ಬರು. ಎಸ್‌.ಟಿ. ಸಮುದಾಯದಲ್ಲಿ ಪ್ರಶ್ನಾತೀತ ಪ್ರಭಾವಿ ರಾಜ್ಯ ನಾಯಕರಾದ ಇವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಸಂಪುಟದ ಪ್ರಮುಖ ಖಾತೆಯನ್ನೂ ನೀಡಬೇಕು. ಮತ್ತುಎಸ್.ಸಿ, ಎಸ್.ಟಿ. ಸಮುದಾಯದವರಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ಹೆಚ್ಚಿನ ಸಂಖ್ಯೆಗಳಲ್ಲಿ ನೀಡಬೇಕೆಂದರು. ಶೋಷಿತ ಸಮುದಾಯಗಳಿಗೆ ಹೆಚ್ಚಿನ ರಾಜಕೀಯ ಅಧಿಕಾರ ನೀಡಿದರೆ ಸಮಾಜೋಭಿವೃದ್ಧಿ ಸಾಧ್ಯ ಎಂಬುದು ಸಂವಿಧಾನದ ಆಶಯವಾಗಿರುತ್ತದೆ. ಸಂವಿಧಾನ ಪರವಾದ ಕಾಂಗ್ರೇಸ್‌ ಪಕ್ಷ ಶೋಷಿತ ಸಮುದಾಯದವರಿಗೆ ಹೆಚ್ಚಿನ ಸ್ಥಾನ ನೀಡಿ ಸಾಮಾಜಿಕ ನ್ಯಾಯ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಘುದೊಡ್ಡಮನಿ,ಪಿ.ಬಿ ಅಂಜುಕುಮಾರ್,ಕರಿಯಪ್ಪ ಮಾಳಿಗೇರ್ ಉಪಸ್ಥಿತರಿದ್ದರು.