
ಮಾಲೂರು,ಮೇ.೨೩-:ಕರ್ನಾಟಕ ರಾಜ್ಯ ಸರ್ಕಾರದ ನೂತನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ವಾಲ್ಮೀಕಿ ಸಮುದಾಯದ ಹಿರಿಯ ಪ್ರಭಾವಿ ನಾಯಕ ಸಚಿವ ಸತೀಶ್ ಜಾರಕಿಹೊಳಿರವರನ್ನು ಕೋಲಾರ ಜಿಲ್ಲೆಯ ವಾಲ್ಮೀಕಿ ನಾಯಕ ಜನಾಂಗದ ಮುಖಂಡರು ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿ ಶುಭ ಕೋರಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಜನಸಾಮಾನ್ಯರಿಗೆ ಸ್ಪಂದಿಸುವ ಮೂಲಕ ಚುನಾವಣೆಗೆ ಮುನ್ನ ನೀಡಿರುವ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿಗಳ ಭರವಸೆಗಳನ್ನು ಮೊದಲ ಸಂಪುಟದಲ್ಲಿಯೇ ನೀಡಲು ಅನುಮೋದಿಸಿದೆ. ಕಾಂಗ್ರೆಸ್ ಸರ್ಕಾರವು ಉತ್ತಮ ಆಡಳಿತವನ್ನು ನೀಡಲಿದ್ದು ಎಲ್ಲಾ ವರ್ಗದ ಜನರನ್ನು ಒಗ್ಗಟ್ಟಾಗಿ ಕರೆದೊಯ್ಯುವ ಕೆಲಸ ಮಾಡುತ್ತದೆ, ವಾಲ್ಮೀಕಿ ಸಮುದಾಯದ ಸಂಘಟನೆಗಳು ನನ್ನನ್ನು ಭೇಟಿ ಮಾಡಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಭಿನಂದಿಸಿದ್ದಾರೆ. ಸಮುದಾಯದವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ಅವರ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.
ವಾಲ್ಮೀಕಿ ನಾಯಕ ಸಂಘದ ರಾಜ್ಯ ಅಧ್ಯಕ್ಷ ಹೆಚ್.ಆರ್.ಶಿವಕುಮಾರ್, ವಾಲ್ಮೀಕಿ ಗುರುಪೀಠದ ಕೋಲಾರ ಜಿಲ್ಲಾ ಧರ್ಮದರ್ಶಿ ಮಾಲೂರು ಎನ್.ವೆಂಕಟರಾಮ್, ಮುಳಬಾಗಿಲು ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗಡ್ಡೂರು ಜಯಪ್ರಕಾಶ್ ನಾಯಕ, ಮಾಲೂರು ತಾಲೂಕು ವಾಲ್ಮೀಕಿ ಯುವ ವೇದಿಕೆ ಅಧ್ಯಕ್ಷ ಟಿ.ಕೆ.ನಾಗರಾಜ್, ಬಂಗಾರಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಕಾಮಂಡಹಳ್ಳಿ ನಾರಾಯಣಸ್ವಾಮಿ, ಜಯಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾಳಕುಂಟೆ ಸೋಮಶೇಖರ್, ಹಾಗೂ ವಾಲ್ಮೀಕಿ ನಾಯಕ ಜನಾಂಗದ ಮುಖಂಡರಾದ ಕೇಶವಪ್ಪ, ಮೇಹನ್, ಗಣೇಶ್, ಆಂಜಿನಪ್ಪ, ಶಿವಣ್ಣ, ಭಾಸ್ಕರ್, ಇತರರು ಹಾಜರಿದ್ದರು.