ಸತೀಶ್ ಕ್ಷಮೆಗೆ ಬಿಎಸ್‌ವೈ ಆಗ್ರಹ

ಬೆಂಗಳೂರು,ನ.೯- ಹಿಂದೂ ಅಶ್ಲೀಲ ಪದ ಎಂಬ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಷಮೆ ಕೇಳದಿದ್ದರೆ ಜನ ಪಾಠ ಕಲಿಸುತ್ತಾರೆ ಎಂದರು.
ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ, ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಗೆ ಕ್ಷಮೆ ಕೇಳುವುದನ್ನು ಬಿಟ್ಟು ಹಾಗಲ್ಲ ಹೀಗೆ ಎಂದು ಮಾತನಾಡುತ್ತಿರುವುದು ಸರಿಯಲ್ಲ, ಅವರು ಕೂಡಲೇ ಕ್ಷಮೆಯಾಚಿಸಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದರೆ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.ಇಂದು ಸಂಜೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಚುನಾವಣೆ ಸಮಿತಿಯ ಸಭೆ ಇದ್ದು, ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿದ್ದೇನೆ. ನಾಳೆ ಬೆಂಗಳೂರಿಗೆ ವಾಪಸ್ಸಾಗುತ್ತೇನೆ ಎಂದರು.ಈ ಸಭೆಯ ಸಂದರ್ಭದಲ್ಲಿ ಪಕ್ಷದ ವರಿಷ್ಠರ ಜತೆ ರಾಜ್ಯರಾಜಕಾರಣದ ಬಗ್ಗೆ ರಾಜ್ಯ ಚುನಾವಣೆಯ ಬಗ್ಗೆ ಚರ್ಚೆ ನಡೆಸುವುದಿಲ್ಲ. ಇದಕ್ಕೆಲ್ಲ ಇನ್ನೂ ಸಮಯವಿದೆ ಎಂದರು.