ಸತತ 5ನೇ ದಿನವೂ 3 ಲಕ್ಷ ಗಡಿ ದಾಟಿದ ಸೋಂಕು: ನೆರವಿನ ಹಸ್ತ ಚಾಚಿದ ಅಮೆರಿಕಾ

ನವದೆಹಲಿ, ಏ. ೨೬- ದೇಶದಲ್ಲಿ ದಿನದಿಂದ ದಿನಕ್ಕೆ ಬಿರುಗಾಳಿಯ ಸ್ವರೂಪ ಪಡೆದಿರುವ ಎರಡನೇ ಅಲೆಯ ಕೊರೊನಾ ಸೋಂಕು ಕೆಲವೇ ರಾಜ್ಯಗಳಲ್ಲಂತು ಅಟ್ಟಹಾಸ ಮೆರೆಯುತ್ತಿದೆ. ಇದರ ಪರಿಣಾಮ ಸೋಂಕಿತರಿಗೆ ಹಾಸಿಗೆ, ಆಮ್ಲಜನಕ, ಔಷಧಿ ಸಿಗದೆ ಪರಿಸ್ಥಿತಿ ಬಿಗಡಾಯಿಸಿದೆ.
ವಿಶ್ವದಲ್ಲಿಯೇ ಅತಿವೇಗವಾಗಿ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಗದೆ ತಬ್ಬಿಬ್ಬಾಗಿದೆ. ರಾಕೆಟ್ ವೇಗದಲ್ಲಿ ಹೆಚ್ಚುತ್ತಿರುವ ಸೋಂಕಿನ ವೇಗದಿಂದಾಗಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗದೆ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ.
ಭಾರತದ ಪರಿಸ್ಥಿತಿಯನ್ನು ಗಮನಿಸಿದ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಇದರ ಜೊತೆಗೆ ವಿಶ್ವದ ಅನೇಕ ದೇಶಗಳೂ ಕೂಡ ಭಾರತದೊಂದಿಗೆ ನಾವಿದ್ದೇವೆ ಎನ್ನುವ ಅಭಯ ನೀಡಿವೆ.
ದೇಶದಲ್ಲಿ ಸತತ ಐದನೇ ದಿನವೂ ೩ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ದಾಖಲೆ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ದೇಶದಲ್ಲಿ ಇದುವರಗೆ ಕಾಣಿಸಿಕೊಂಡಿದ್ದ ಸೋಂಕಿನ ದಾಖಲೆಯನ್ನು ಹಿಂದಿಕ್ಕಿದೆ. ಇದು ಸಹಜವಾಗಿಯೇ ಸೋಂಕು ಹೆಚ್ಚುತ್ತಿರುವ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ಮುಂದೇನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ.
೩.೫೨ ಲಕ್ಷ ಮಂದಿಗೆ ಸೋಂಕು:
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೩,೫೨,೯೯೧ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ೨೮೧೨ ಮಂದಿ ಸಾವನ್ನಪ್ಪಿದ್ದು ಇದುವರೆಗೆ ದೇಶದಲ್ಲಿ ಸಾವು ಮತ್ತು ಸೋಂಕಿನಲ್ಲಿ ದಾಖಲೆ ಬರೆದಿದೆ. ಅದರಲ್ಲಿಯೂ ಸೋಂಕಿನ ವಿಷಯದಲ್ಲಿ ದಿನನಿತ್ಯ ಹೆಚ್ಚುತ್ತಿರುವ ವೇಗ ಅಮೇರಿಕಾವನ್ನು ಹಿಂದಿಕ್ಕಿದೆ.
ಇಂದು ಬೆಳಿಗ್ಗೆ ೮ ಗಂಟೆಯವರೆಗೆ ೨,೧೯,೨೭೨ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ ೧,೭೩,೧೩,೧೬೩ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ೧,೪೩,೦೪,೩೮೨ ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ ೧,೯೫,೧೨೩ಕ್ಕೆ ಏರಿಕೆಯಾಗಿದ್ದು ೨ ಲಕ್ಷ ಗಡಿ ಸಮೀಪಿಸುತ್ತಿದೆ.
ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಪ್ರತಿಶತ ೧.೧೩ ರಷ್ಟು ಇದೆ.ದಿನ ನಿತ್ಯ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಶರವೇಗದ ಪಡೆದ ಸಕ್ರಿಯ ಪ್ರಕರಣ
ದೇಶದಲ್ಲಿ ನಿತ್ಯ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶರವೇಗ ಪಡೆದುಕೊಂಡಿದೆ.
ಸದ್ಯ ದೇಶದಲ್ಲಿ ೨೮,೧೩,೬೫೮ ಮಂದಿಯಲ್ಲಿ ಸಕ್ರಿಯ ಪ್ರಕರಣ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಸಿಗದೆ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಪಂಜಾಬ್, ಹರಿಯಾಣ,ಕೇರಳ, ತಮಿಳುನಾಡು, ಆಂದ್ರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸ್‌ಗಡ, ಚಂದಿಘಡ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಏರಿಕೆಯಾಗಿದೆ.
ದೇಶಲ್ಲಿ ಇದುವರೆಗೆ ೧೪,೧೯,೧೧,೨೨೩ ಮಂದಿಗೆ ಕೊರೊನಾ ಸೋಂಕಿನ ಲಸಿಕೆ ಹಾಕಲಾಗಿದೆ ಎಂದು ಕೇಂದ್ರಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬಾಕ್ಸ್-೧
ಕುಸಿದ ಚೇತರಿಕೆ
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಪ್ರತಿಶತ ೮೨.೬೨ಕ್ಕೆ ಕುಸಿದೆ.
ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟಾರೆ ಸೋಂಕಿನಲ್ಲಿ ಶೇ.೧೬.೨೫ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೪,೦೨,೩೬೭ ಮಂದಿಗೆ ಕೊರೊನಾ ಮಾದರಿ ಪರೀಕ್ಷೆ ಮಾಡಿದ್ದು ಇದುವರೆಗ ದೇಶದಲ್ಲಿ ೨೭,೯೩,೨೧,೧೭೭ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ-ಐಸಿಎಂಆರ್ ತಿಳಿಸಿದೆ.