ಸತತ 35 ದಿನದಿಂದ ಕೊರೋನಾ ಇಳಿಕೆ: ಸೋಂಕಿನ ಗುಣಮುಖ ಅಧಿಕ

ನವದೆಹಲಿ.ನ. 7-ದೇಶದಲ್ಲಿ ಕಳೆದ ಒಂದು ತಿಂಗಳಿಂದ ಕೊರೊನಾ ಸೋಂಕು ಪ್ರಕರಣಗಳಿಗಿಂತ ಗುಣಮಖರ ಸಂಖ್ಯೆ  ಅಧಿಕವಾಗಿದೆ.

ಕಳೆದ ಐದು ವಾರಗಳಿಂದೀಚೆಗೆ ಪ್ರತಿ ದಿನ ಸರಾಸರಿ ಸೋಂಕು ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿದೆ.

ಪ್ರತಿ ದಿನ ಸರಾಸರಿ ಹೊಸ ಸೋಂಕು ಪ್ರಕರಣಗಳು ಅಕ್ಟೋಬರ್ ಮೊದಲ ವಾರದಲ್ಲಿ 73,000ಕ್ಕೂ ಅಧಿಕವಿತ್ತು. ಇದೀಗ ಆ ಪ್ರಮಾಣ ಪ್ರತಿ ದಿನ ಸರಾಸರಿ 46,000ಕ್ಕೆ ಇಳಿಕೆಯಾಗಿದೆ

ದೇಶದಲ್ಲಿ ಒಟ್ಟಾರೆ ಗುಣಮುಖರಾಗುತ್ತಿರುವವರ ಸಂಖ್ಯೆ 78,19,886ಕ್ಕೆ ಏರಿಕೆಯಾಗಿದ್ದು, ಇದರಿಂದಾಗಿ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 92.41 ತಲುಪಿದೆ. ‌ಇದರಿಂದಾಗಿ ಸದ್ಯ ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾಗಿರುವ ಪ್ರಕರಣಗಳ ನಡುವಿನ ಅಂತರ 73,03,254 ಇದೆ.

ಹೊಸದಾಗಿ ಗುಣಮುಖರಾಗಿರುವ ಪ್ರಕರಣಗಳಲ್ಲಿ 79ರಷ್ಟು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ ಸೋಂಕಿತರು ಗುಣಮುಖರಾಗಿದ್ದಾರೆ. ಆ ರಾಜ್ಯದಲ್ಲಿ ಒಂದೇ 11,060 ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 15,62,342ಕ್ಕೆ ಏರಿಕೆಯಾಗಿದೆ.

ರಾಷ್ಟ್ರೀಯ ಸರಾಸರಿಯನ್ನು ಗಮನಿಸಿದರೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಪ್ರಮಾಣದ ಸೋಂಕಿತರು ಗುಣಮುಖರಾಗುತ್ತಿರುವುದು ಕಂಡುಬಂದಿದೆ.

ಶೇ.77ರಷ್ಟು ಹೊಸ ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿವೆ.ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಹೊಸದಾಗಿ 7,178 ಪ್ರಕರಣಗಳು ಪತ್ತೆಯಾಗಿದ್ದು, ಹೊಸ ಪ್ರಕರಣಗಳಲ್ಲಿ ಅದು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳನ್ನು ಹಿಂದಿಕ್ಕಿದೆ. ಕೇರಳದಲ್ಲಿ ಹೊಸದಾಗಿ 7,002 ಮತ್ತು ಮಹಾರಾಷ್ಟ್ರದಲ್ಲಿ 6,870 ಹೊಸ ಪ್ರಕರಣಗಳು ನಿನ್ನೆ ವರದಿಯಾಗಿವೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.83ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಶೇ.27.9ಕ್ಕೂ ಅಧಿಕ ಸಾವುಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ದೆಹಲಿ ಮತ್ತು ಪಶ್ಚಿಮ ಬಂಗಾಳ ಆ ನಂತರದ ಸ್ಥಾನದಲ್ಲಿದ್ದು, ಅಲ್ಲಿ ಕ್ರಮವಾಗಿ 64 ಮತ್ತು 55 ಸೋಂಕಿತರು ಹೊಸದಾಗಿ ಸಾವನ್ನಪ್ಪಿದ್ದಾರೆ.