ಸತತ 3ನೇ ಬಾರಿಗೆ ಸರ್ಕಾರ ರಚಿಸುತ್ತೇವೆ:ಪ್ರಧಾನಿ ಮೋದಿ ವಿಶ್ವಾಸ

ನವದೆಹಲಿ, ಜೂ.4- ಇಂದಿನ ಲೋಕಸಭಾ ಚುನಾವಣೆಯ ಗೆಲುವು ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಧ್ಯೇಯದ ಜಯ. ಇದು ದೇಶದ 140 ಕೋಟಿ ಜನರ ಜಯ ಆಗಿದ್ದು, ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

202ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ನಂತರ ರಾಷ್ಟ್ರ ರಾಜಧಾನಿ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೊದಲಿಗೆ ಧನ್ಯವಾದ ತಿಳಿಸಿದ ಮೋದಿ, ಸತತ 3ನೇ ಬಾರಿಗೆ ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದರು. ಈ ಬಾರಿಯ ಚುನಾವಣೆ ಗೆಲುವು ಪ್ರಜಾಪ್ರಭುತ್ವದ ಗೆಲುವು, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಂತ್ರದ ವಿಜಯ ಎಂದು ಅವರು ಉಲ್ಲೇಖಿಸಿದರು.

ನಾನು ಪ್ರತಿಯೊಬ್ಬ ಬಿಜೆಪಿ ಮತ್ತು ಎನ್‌ಡಿಎ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. 1962 ರ ನಂತರ ಇದೇ ಮೊದಲ ಬಾರಿಗೆ ಸರ್ಕಾರವು 3 ನೇ ಬಾರಿಗೆ ಸತತ ಗೆಲುವು ಸಾಧಿಸಿದೆ ಎಂದ ಅವರು, ದೇಶದಾದ್ಯಂತ ಸುಗಮವಾಗಿ ಚುನಾವಣೆ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ಕೃತಜ್ಞನಾಗಿದ್ದೇನೆ.

ಇಂತಹ ದೊಡ್ಡ ಪ್ರಮಾಣದ ಚುನಾವಣೆ ನಡೆಸಿದ್ದಕ್ಕಾಗಿ ನಾನು ಭಾರತದ ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಭಾರತದ ಚುನಾವಣಾ ಪ್ರಕ್ರಿಯೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ ಎಂದು ನುಡಿದರು.

ಇದೇ ವೇಳೆ ಒಡಿಶಾ ವಿಧಾನಸಭಾ ಚುನಾವಣೆಯ ಬಿಜೆಪಿ ಗೆಲುವನ್ನು ಉಲ್ಲೇಖಿಸಿದ ಅವರು, ಒಡಿಶಾದಲ್ಲಿ ನಾವು ಸರ್ಕಾರ ರಚಿಸುತ್ತಿದ್ದೇವೆ. ಮಹಾಪ್ರಭು ಭೂಮಿಯಲ್ಲಿ ಬಿಜೆಪಿಯವರು ಮುಖ್ಯಮಂತ್ರಿಯಾಗಲಿರುವುದು ಇದೇ ಮೊದಲು. ಜನರ ಕನಸುಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಎಲ್ಲವನ್ನೂ ಮಾಡುತ್ತದೆ ಎಂದು ನಾನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ ಎಂದರು.