ಸತತ ಪರಿಶ್ರಮ ಪ್ರಯತ್ನದಿಂದ ಗುರಿ, ಸ್ಪಷ್ಟತೆ ಹೊಂದಿರಬೇಕು

ಚಾಮರಾಜನಗರ, ನ.12:- ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮ, ನಿರಂತರ ಅಧ್ಯಯನ ಪ್ರಯತ್ನದಿಂದ ಸಾಗುವ ಗುರಿಯೆಡೆಗೆ ವಿದ್ಯಾರ್ಥಿಗಳು ಸ್ಪಷ್ಠತೆಯನ್ನು ಹೊಂದಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೈಯಲು ಉತ್ತಮ ಅವಕಾಶಗಳು ಬೇಕಾಗಿವೆ. ವಿಷಯಗಳ ಆಯ್ಕೆಯಲ್ಲಿ ಸ್ಪರ್ಧಾತ್ಮಕತೆ ಇರಬೇಕು. ಕೆಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಬರೆದರೆ ಇನ್ನುಳಿದವರು ಖಾಸಗೀ ಕ್ಷೇತ್ರದತ್ತ ಒಲವು ಹೊಂದಿರುತ್ತಾರೆ. ಒಟ್ಟಾರೆ ವಿಷಯಗಳ ಮಾಹಿತಿಯನ್ನು ತಲುಪಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳ ಬುದ್ದಿಮತ್ತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಮಟ್ಟದಲ್ಲಿ ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಮೊಬೈಲ್ ಬಳಕೆಯಿಂದ ಇಂದಿನ ವಿದ್ಯಾರ್ಥಿಗಳಲ್ಲಿ ಆಲೋಚನಾ ಕ್ರಮ ಕಡಿಮೆಯಾಗುತ್ತಿದೆ. ಯಾವುದನ್ನೇ ಆಗಲಿ ಮಿತವಾಗಿ ಬಳಸುವ ಮೂಲಕ ಸಕಾರಾತ್ಮಕ ಚಿಂತನೆಯೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು. ವಿಷಯತಜ್ಞರ ಜೊತೆಗೆ ಚರ್ಚಿಸುವ ಮೂಲಕ ಸಕಾರಾತ್ಮಕ ಅರಿವು ಹೊಂದಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವಿದ್ಯಾರ್ಥಿಗಳು ಉತ್ತಮ ಭವಿಷ್ಯದೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿನಿಲಯಗಳಲ್ಲಿ ಊಟ, ವಸತಿ, ಇನ್ನಿತರೆ ಮೂಲಸೌಕರ್ಯಗಳೊಂದಿಗೆ ಮಕ್ಕಳ ಜ್ಞಾನಾರ್ಜನೆಗಾಗಿ ಸುವ್ಯಸ್ಥಿತ ಗ್ರಂಥಾಲಯಗಳಿರಬೇಕು. ಮುಂದಿನ ದಿನಗಳಲ್ಲಿ ಗ್ರಂಥಾಲಯಗಳಿಗೆ ಅವಶ್ಯವರುವ ಪುಸ್ತಕಗಳ ಪಟ್ಟಿ ನೀಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಕೆಗಾಗಿ ಖಾಸಗಿಯಾಗಿ ಕುಳಿತು ಓದಲು ಪ್ರತ್ಯೇಕ ಅಧ್ಯಯನ ಕೊಠಡಿಗಳು ಇರಬೇಕು. ಅಲ್ಲದೆ ವಾರಾಂತ್ಯದಲ್ಲಿ ವಿಷಯತಜ್ಞರ ಪಠ್ಯವಿಷಯಗಳ ಕುರಿತು ಕೂಲಕುಂಶವಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಸಿ.ಇ.ಒ ಗಾಯತ್ರಿ ಅವರು ತಿಳಿಸಿದರು.
ಮೈಸೂರಿನ ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರು, ಲೇಖಕರಾದ ಅಂಶಿ ಪ್ರಸನ್ನಕುಮಾರ್ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಇದು ಸ್ಪರ್ಧಾತ್ಮಕ ಯುಗ. ಇಂದು ಯುವಜನತೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಹೊಂದಿದ್ದಾರೆ. ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಭಾರತೀಯರು, ಕರ್ನಾಟಕದವರು, ಜಿಲ್ಲೆಯವರು ವಿವಿಧ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸ್ಪರ್ಧಾತ್ಮಕ ಅವಕಾಶಗಳೇ ಕಾರಣವಾಗಿವೆ ಎಂದರು. ಬದಲಾದ ಕಾಲಘಟ್ಟದಲ್ಲಿ ಇಂದು ಪ್ರತಿಯೊಂದು ಹುದ್ದೆಗಳಿಗೂ ಪ್ರವೇಶ ಪರೀಕ್ಷೆ ಇದೆ. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ವಿಶ್ವದ ಯಾವುದೇ ಭಾಗದಲ್ಲಿ ಏನೇ ನಡೆದರೂ ಕ್ಷಣಾರ್ಧದಲ್ಲಿ ಎಲ್ಲರಿಗೂ ತಿಳಿಯಲಿದೆ. ಪ್ರಚಲಿತ ವಿದ್ಯಮಾನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಯುವಜನರಿಗೆ ಸಾಕಷ್ಟು ಅವಕಾಶಗಳಿವೆ. ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿ ಮಾಧ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಸಮಾಜ ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಮಾಧ್ಯಮ ಕ್ಷೇತ್ರದಲ್ಲಿಂದು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಸ್ವರೂಪ ಬದಲಾಗಿದೆ. ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯು ಅವಶ್ಯವಾಗಿದೆ. ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವ ಹವ್ಯಾಸದೊಂದಿಗೆ ಮೊಬೈಲ್, ಟಿ.ವಿ ಬಳಕೆಯನ್ನು ಕಡಿಮೆ ಮಾಡಿ ಗ್ರಂಥಾಲಯಗಳಲ್ಲಿ ಹೆಚ್ಚಿನ ಪುಸ್ತಕಗಳನ್ನು ಓದಿ ವಿಷಯಗಳನ್ನು ಮನನ ಮಾಡಿಕೊಳ್ಳಬೇಕು. ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಸ್ವಾಥ್ಯ ಕಾಪಾಡಿಕೊಂಡು ಸಮಾಜದ ಸತ್ಪ್ರಜೆಗಳಾಗಬೇಕು ಎಂದು ಅಂಶಿ ಪ್ರಸನ್ನಕುಮಾರ್ ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪಿ.ಎನ್. ಹೇಮಚಂದ್ರ ಅವರು ಉದ್ಯೋಗ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ಪರಿಚಯ ಕುರಿತು, ಮೈಸೂರಿನ ಸಿದ್ದಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹ ಪ್ರಾಧ್ಯಾಪಕರಾದ ಕೆ.ಎ. ಪ್ರಸನ್ನಕುಮಾರ್ ಅವರು ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲಗಳು ಕುರಿತು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಅವರು ಕ್ರೀಡಾ ಕ್ಷೇತ್ರ ಕುರಿತು ವಿಷಯ ಮಂಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ, ಇತರರು ಕಾರ್ಯಾಗಾರದಲ್ಲಿ ಹಾಜರಿದ್ದರು.
ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ವಿಷಯಗ್ರಹಿಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು.