
ಚಾಮರಾಜನಗರ, ಫೆ.27:- ಸತತ ಪರಿಶ್ರಮ, ಛಲವಿದ್ದರೆ ಗುರಿ ಸಾಧನೆ ಬಡತನ ಅಡ್ಡಿ ಬರುವುದಿಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಅಭಿಪ್ರಾಯಪಟ್ಟರು.
ಮೆಕಾನಿಕಲ್ ಇಂಜಿನಿಯರ್ ಹಾಗೂ ಎಂಟೆಕ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುವ ತಾಲೂಕಿನ ಬಿಸಲವಾಡಿ ಗ್ರಾಮದ ಬಡರೈತನ ಮಗನಾದ ಕೃಷ್ಣನಾಯಕ ಅವರನ್ನು ನಗರದ ಭಗೀರಥ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು.
ಹಿಂದುಳಿದ ಗಡಿಯಂಚಿನ ಬಿಸಲವಾಡಿ ಗ್ರಾಮದಲ್ಲಿ ಜನಿಸಿದ ಕೃಷ್ಣನಾಯಕ ಕಡುಬಡತನದಲ್ಲಿ ಬೆಳೆದು ತಂದೆ, ತಾಯಿಯನ್ನು ಕಳೆದುಕೊಂಡರೂ ಧೃತಿಗೆಡದೆ ಸತತ ಪರಿಶ್ರಮದಿಂದ ಛಲ ಬೆಳಸಿಕೊಂಡು ಇಂದು ಚಿನ್ನದಪದಕ ಪಡೆಯುವ ಮೂಲಕ ಗುರಿ ಮುಟ್ಟಿದ್ದಾರೆ. ಇವರು ಬಡತನ ನೊಗ ಹೊತ್ತಿದ್ದರೂ ಗುರಿ ಸಾಧನೆ ಮಾಡಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.
ಕೇವಲ 2 ಎಕರೆ ಜಮೀನು ಹೊಂದಿರುವ ಇವರ ಕುಟುಂಬದಲ್ಲಿ ಬಡತನವೇ ಕಾರುಬಾರು ಆದರೂ ಕೃಷ್ಣನಾಯಕ ಕಷ್ಠಪಟ್ಟು ವಿದ್ಯಾಭ್ಯಾಸ ಮಾಡಿ ಇಂದು ನಮ್ಮ ಕಣ್ಣಮುಂದೆ ಚಿನ್ನದ ಹುಡುಗನಾಗಿ ಗ್ರಾಮ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ, ಅವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಪಿಎಚ್‍ಡಿ ಮಾಡುವ ಬಯಕೆ: ಸನ್ಮಾನ ಸ್ವೀಕರಿಸಿಚಿನ್ನದಪದಕ ಪಡೆದಕೃಷ್ಣನಾಯಕ ಮಾತನಾಡಿ, ನಾನು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಗ್ರಾಮಾಂತರ ಪ್ರದೇಶದಲ್ಲಿ ಮಾಡಿರುತ್ತೇನೆ. ಪ್ರತಿ ವಿಷಯವನ್ನು ತಿಳಿಯುವ ಕುತೂಹಲ ನನ್ನಲ್ಲಿತ್ತು. ಆ ಕುತೂಹಲ ಶ್ರಮ ಈ ಸಾಧನೆಗೆ ಮೆಟ್ಟಿಲು ಆಯಿತು ಮುಂದೆ ಪಿಎಚ್‍ಡಿ ಮಾಡುವ ಇಚ್ಚೆ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಸಲವಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಿರೀಶ್, ಮಹದೇವಪ್ಪ, ಪಿಎಸಿಸಿ ಭ್ಯಾಂಕ್ ಅಧ್ಯಕ್ಷ ಸಿದ್ದನಾಯಕ,ನಿರ್ದೇಶಕ ಮಹದೇವಣ್ಣ, ಗ್ರಾ.ಪಂ ಮಾಜಿ ಸದಸ್ಯ ನಾರಾಯಣನಾಯಕ, ನಾಗರಾಜು, ಮುಖಂಡ ಚನ್ನಬಸಪ್ಪ, ಉಪನ್ಯಾಸಕ ಚೇತನ್, ಚಿನ್ನದಪದಕ ಕೃಷ್ಣನಾಯಕ, ಸಹೋದರ ಕುಮಾರ್, ಪತ್ನಿ ಸುಮಾ, ಅತ್ತಿಗೆ ಲಕ್ಷ್ಮೀ ಹಾಜರಿದ್ದರು.