ಸತತ ಪರಿಶ್ರಮವೇ ಸಾಧನೆಯ ಗುಟ್ಟು : ಬಸವರಾಜ ಜಾಬಶೆಟ್ಟಿ

ಬೀದರ:ಸೆ.2: ಸತತ ಪರಿಶ್ರಮವೇ ವಿದ್ಯಾರ್ಥಿಗಳ ಸಾಧನೆಯ ಪ್ರಮುಖ ಗುಟ್ಟಾಗಿದೆ. ಪಾಲಕರ ತ್ಯಾಗ ಮತ್ತು ಕಠಿಣ ಪರಿಶ್ರಮವನ್ನು ಪರಿಗಣನೆಗೆ ತೆಗೆದುಕೊಂಡು ನಿರಂತರ ಅಧ್ಯಯನ ಮಾಡಿ ಗುರಿ ತಲುಪಬೇಕೆಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.

ಆಗಸ್ಟ್ 29,30 ಮತ್ತು 31 ರಂದು ಮೂರುದಿವಸಗಳ ಕಾಲ ಕರ್ನಾಟಕ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕರ್ನಾಟಕ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ಕೇಂದ್ರದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಜನಸಂಖ್ಯೆ ಹೆಚ್ಚಾಗಿದೆ. ಉದ್ಯೋಗ ಗಗನಕುಸುಮವಾಗಿದೆ. ಮಕ್ಕಳು ಪದವಿ ಮುಗಿದ ನಂತರ ಪ್ರಮಾಣ ಪತ್ರಗಳನ್ನು ಹಿಡಿದುಕೊಂಡು ಅಲ್ಲಿ ಇಲ್ಲಿ ಓಡಾಡಬಾರದೆಂದು ಕಾಲೇಜಿನ ಕ್ಯಾಂಪಸ್‍ನಲ್ಲಿ ಜಾಬ್ ಮೇಳ ಆಯೋಜಿಸಿ ಸುಮಾರು 49 ವಿದ್ಯಾರ್ಥಿಗಳಿಗೆ ವಿವಿದ ಕಂಪನಿಗಳಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ತರಬೇತಿ ನೇಮಕಾತಿ ಆದೇಶ ಪತ್ರವನ್ನು ವಿತರಣೆ ಮಾಡಲಾಗಿದೆ. ಮಕ್ಕಳು ಉತ್ತಮ ತರಬೇತಿಯನ್ನು ಪಡೆದುಕೊಂಡು ಉದ್ಯೋಗ ಗಿಟ್ಟಿಸಿ ಬದುಕು ಹಸನು ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಐಸಿಐಸಿಐ ಬ್ಯಾಂಕ್‍ನ ಧೃಢೀಕೃತ ಸಂಸ್ಥೆ ಎನ್‍ಐಐಟಿ ಯ ತರಬೇತುದಾರರಾದ ಖಾಜಾ ಮೈನೋದ್ದಿನ್ ಮಾತನಾಡಿ ಎನ್‍ಐಐಟಿ ಯಲ್ಲಿ ತರಬೇತಿ ಪಡೆದುಕೊಂಡು ಮುಂದಿನ 32 ಜನ ಐಸಿಐಸಿಐ ಬ್ಯಾಂಕ್‍ನ ಭಾವೀ ವ್ಯವಸ್ಥಾಪಕರನ್ನು ನೀಡಿದ ಕರ್ನಾಟಕ ಕಾಲೇಜಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ತರಬೇತಿ ನೇಮಕಾತಿ ಆದೇಶ ಪತ್ರವನ್ನು ಪಡೆದ ವಿದ್ಯಾರ್ಥಿಗಳ ತಂದೆ-ತಾಯಿಗಳ ಪರಿಶ್ರಮ ಇಂದು ಫಲಿಸಿದೆ. ಪ್ರತೀ ವರ್ಷ ನೂರಕ್ಕೆ ಕೇವಲ 22% ಪ್ರತಿಶತ ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಉಳಿದ 78% ಪ್ರತಿಶತ ಜನರು ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ಹೀಗಾಗಿ ಕಷ್ಟಪಟ್ಟು ಓದುತ್ತಾರೋ ಅವರೇ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ತಿಳಿಸಿದರು.

ಖ್ಯಾತ ವಿಜ್ಞಾನಿಗಳು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕಲಬುರಗಿಯ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ತರಬೇತಿಯನ್ನು ಪಡೆದುಕೊಂಡು, ಉದ್ಯೋಗಕ್ಕೆ ಸೇರಿದ ನಂತರ ಕಲಿತ ಕಾಲೇಜಿಗೆ ಹಾಗೂ ಕಾರ್ಯಕ್ಷೇತ್ರವಾದ ಕಂಪನಿಗೆ ಉತ್ತಮ ಹೆಸರು ತರಬೇಕು. ನಿಮ್ಮ ಕರ್ತವ್ಯನಿಷ್ಠೆ ಮತ್ತು ಸಮಯ ಪರಿಪಾಲನೆ ನಿಮ್ಮನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾದರಸದಂತೆ ಅಧ್ಯಯನ ಮಾಡಿ ಚಾಕಚಕ್ಯತೆಯಿಂದ ಉದ್ಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಕಾಲೇಜಿನ ತರಬೇತಿ ಮತ್ತು ಉದ್ಯೋಗ ಕೇಂದ್ರದ ಅಧಿಕಾರಿ ಪ್ರೊ. ಅನೀಲಕುಮಾರ ಚಿಕ್ಕಮಾಣೂರ ಪ್ರಾಸ್ತಾವಿಕ ಮಾತನಾಡಿ 2020 ರಿಂದ 22ರ ವರೆಗೆ ಎರಡು ಬಾರಿ ಉದ್ಯೋಗ ಮೇಳ ಆಯೋಜಿಸಿ ಕೋವಿಡ್ ಸಂದರ್ಭದಲ್ಲಿಯೂ ಪದವಿ ಮುಗಿಯುವಷ್ಟರಲ್ಲಿ ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು, ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಒದಗಿಸಿಕೊಡುವ ಪ್ರಯತ್ನ ಮಾಡಿದ್ದೇವೆ. ಅಲ್ಲದೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ತರಬೇತಿ ನೀಡುತ್ತಿದ್ದೇವೆ. ಅದರ ಪ್ರತಿಫಲವಾಗಿಯೇ ಇಂದು ಹೈದರಾಬಾದ, ಬೆಂಗಳೂರು ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ನಮ್ಮ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಕರ್ನಾಟಕ ಕಾಲೇಜಿನ ಒಟ್ಟು 49 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತರಬೇತಿ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು. ವೇದಿಕೆ ಮೇಲೆ ಕರಾಶಿ ಸಂಸ್ಥೆ ಉಪಾಧ್ಯಕ್ಷ ಬಿ.ಜಿ.ಶೆಟಕಾರ, ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಸಿದ್ಧರಾಜ ಪಾಟೀಲ, ರವಿ ಹಾಲಳ್ಳಿ, ವೀರಭದ್ರಪ್ಪ ಬುಯ್ಯಾ, ಶ್ರೀನಾಥ ನಾಗೂರೆ, ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಉಪಸ್ಥಿತರಿದ್ದರು.

ಕು. ಆಶಾ ಪ್ರಾರ್ಥಿಸಿದರು. ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ಲಕ್ಷ್ಮೀ ಕುಂಬಾರ ಸ್ವಾಗತಿಸಿದರು. ಡಾ. ವಿನೋದಕುಮಾರ ಕಾಳೆಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ತರಬೇತಿ ನೇಮಕಾತಿ ಆದೇಶ ಪ್ರತಿ ಪಡೆದುಕೊಂಡ ವಿದ್ಯಾರ್ಥಿಗಳು ಹಾಗೂ ಪಾಲಕರು, ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.