ಸತತ ಪರಿಶ್ರಮದಿಂದ ಪ್ರತಿಫಲ ಸಿಗಲು ಸಾಧ್ಯ

ಧಾರವಾಡ,ಜು25 : ಸತತ ಪರಿಶ್ರಮದ ಸಾಧನೆಯಿಂದ ಮಾತ್ರ ಪ್ರತಿಫಲ ಸಿಗಲು ಸಾಧ್ಯ ಎಂದು ಡಿಡಿಪಿಐ ಎಸ್.ಎಸ್.ಕೆಳದಿಮಠ ಹೇಳಿದರು.
ಇಲ್ಲಿನ ಸೇಂಟ್ ಜೋಸೆಫ್ ಹೈಸ್ಕೂಲ್‍ನಲ್ಲಿ ಆಯೋಜಿಸಿದ್ದ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆರಂಭದಿಂದಲೂ ನಿರಂತರ ಓದು, ಸಂಪೂರ್ಣ ಅರ್ಥೈಸಿಕೊಳ್ಳುವಿಕೆ ಇನ್ನಿತರ ಅಂಶಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತಂದು ಕೊಡಬಲ್ಲವು. ಜೊತೆಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ನೆಮ್ಮದಿಯ ಬದುಕು ಲಭ್ಯವಾಗುತ್ತದೆ. ಈ ದಿಸೆಯಲ್ಲಿ ತಂದೆ-ತಾಯಿಯ ಪ್ರೇರಣೆ ಮತ್ತು ಶಿಕ್ಷಕರ ಮಾರ್ಗದರ್ಶನ ಕೂಡ ನಿರ್ಣಾಯಕ ಪಾತ್ರವಹಿಸುತ್ತದೆ.
ಅಗತ್ಯ ಸೌಕರ್ಯ ಇಲ್ಲದ ಪ್ರದೇಶದ ಮಕ್ಕಳೇ ಅಧಿಕ ಅಂಕ ಗಳಿಸಿ ಸಾಧನೆ ಮಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಎಲ್ಲ ಸೌಕರ್ಯ ಇದ್ದರೂ ಸಮರ್ಪಕವಾಗಿ ಬಳಸಿಕೊಳ್ಳದ ವಿದ್ಯಾರ್ಥಿಗಳು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ತಮಗೆ ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ರೆ.ಫಾ. ಮೈಕಲ್ ಸೋಜಾ, ವಿದ್ಯಾರ್ಥಿಗಳ ಕಲಿಕೆಗೆ ಎಲ್ಲ ಸವಲತ್ತುಗಳನ್ನು ಮತ್ತು ಅಗತ್ಯ ಮಾರ್ಗದರ್ಶನವನ್ನು ಶಾಲೆಯಲ್ಲಿ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದರ ಜೊತೆಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ರೆ.ಫಾ.ಜೆರಾರ್ಡ್ ಡಿ’ಸಿಲ್ವಾ, ರೆ.ಫಾ. ಎಡ್ಡಿ ಡಿ’ಕೋಸ್ಟ್, ರೆ.ಫಾ.ಫಿಡಿಲಿನೋ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗೌರೀಶ ಹಿರೇಮಠ ಸೇರಿದಂತೆ ಇತರ ವಿದ್ಯಾರ್ಥಿಗಳನ್ನು ಮತ್ತು ನೃತ್ಯ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಶಾಲಿನಿ ಕಿತ್ತೂರ ಅವರನ್ನು ಗೌರವಿಸಲಾಯಿತು.
ಶ್ಯಾಮ ಮಲ್ಲನಗೌಡರ ಸ್ವಾಗತಿಸಿದರು. ಲೀನಾ ಅಲ್ಮೇಡಾ ನಿರೂಪಿಸಿದರು. ಶರ್ಮಿಲಾ ಪೇಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲಕರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.