ಸತತ ಪರಿಶ್ರಮದಿಂದ ನಿಶ್ಚಿತ ಗುರಿ ತಲುಪಲು ಸಾಧ್ಯ : ಬಸವರಾಜ ಉಮ್ರಾಣಿ 

ಸಂಜೆವಾಣಿ ವಾರ್ತೆ

ಹುಬ್ಬಳ್ಳಿ.ಸೆ.೨೩: ಏಕಾಗ್ರತೆ , ದೃಢಚಿತ್ತ , ಯೋಗ ಮತ್ತು ಸತತ ಪರಿಶ್ರಮದಿಂದ ಜಟಿಲ ಗಣಿತ ಸಹಿತ ಯಾವುದೇ ವಿಷಯದಲ್ಲಿ ಪ್ರಾವಿಣ್ಯತೆ ಸಾಧಿಸಬಹುದಾಗಿದೆ ಎಂದು ಅಂತರಾಷ್ಟ್ರೀಯ ಮಾನವ ಕಂಪ್ಯೂಟರ್ ಖ್ಯಾತಿಯ ಗಣಿತತಜ್ಞ ಬಸವರಾಜ ಉಮ್ರಾಣಿ ಕಿವಿಮಾತು ಹೇಳಿದರು.ಹೆಗ್ಗೇರಿ ರಸ್ತೆಯ ನೇತಾಜಿ ಕಾಲೋನಿಯಲ್ಲಿರುವ ಕಾರಟಗಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಗಣೇಶೋತ್ಸವ ನಿಮಿತ್ತ ವಿಜಯಲಕ್ಷ್ಮೀ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 25 ಕ್ಕೂ ಅಧಿಕ ಪ್ರೌಢಶಾಲಾ ಹಾಗೂ ಕಾಲೇಜ್ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತಮ್ಮ ಜ್ಞಾನಧಾರೆಯ ಅನುಭವ ವಿವರಿಸಿ ತಿಳುವಳಿಕೆ ನೀಡಿದ ಅವರು. ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ , ಸತತ ಅಧ್ಯಯನ , ಉತ್ತಮ ಗುಣಮಟ್ಟದ ಜ್ಞಾನ ಸಂಗ್ರಹ ಹಾಗೂ ಇದಕ್ಕಾಗಿ ಚಿತ್ತ ಚಂಚಲರಾಗದೇ ಸಾಧಿಸಿಯೇ ತೋರುವ ಹಠದಿಂದ ಏನನ್ನಾದರೂ ಸಾಧಿಸಬಹುದಾಗಿದೆ , ಇದಕ್ಕೆ ಪೂರ್ಣ ಅಂಧನಾಗಿರುವ ನಾನೇ ನಿಮಗೆ ನಿದರ್ಶನನಾಗಿದ್ದೇನೆ ಎಂದರು.ಸಾಮಾನ್ಯವಾಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ , ಆರೋಗ್ಯ ಶಿಬಿರದಂತಹ ಸಾಮಾನ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದು ಸಹಜವಾಗಿರುವ ಇಂದಿನ ದಿನಮಾನಗಳಲ್ಲಿ ಈ ಕಾರಟಗಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹಾಗೂ ವಿಜಯಲಕ್ಷ್ಮೀ ಫೌಂಡೇಶಣ್ ಎಲ್ಲ ಸಾಮಾಜಿಕ ಕೈಂಕರ್ಯಗಳಲ್ಲಿ ಮುಂಚೂಣಿಯಾಗಿ ತನ್ನನ್ನು ತೊಡಗಿಸಿಕೊಂಡು ಇತರ ಆಸ್ಪತ್ರೆಗಳಿಗಿಂತ ಅತ್ಯಂತ ವಿಭಿನ್ನವಾಗಿ ಎದ್ದುಕಾಣುತ್ತಿದೆ ಎಂದು ಬಸವರಾಜ ಉಮ್ರಾಣಿ ಬಣ್ಣಿಸಿದರು.ಆಸ್ಪತ್ರೆಯ ಸಂಸ್ಥಾಪಕ ಡಾ. ರಾಮಚಂದ್ರ ಕಾರಟಗಿ ಅಧ್ಯಕ್ಷತೆವಹಿಸಿದ್ದರು, ಮುಖ್ಯಅತಿಥಿಗಳಾಗಿ ಸಿಪಿಐ ರಾಘವೇಂದ್ರ ಹಳ್ಳೂರ ,ಅಖಿಲ ಭಾರತ ವೀರಶೈವ – ಲಿಂಗಾಯತ ಒಳಪಂಗಡಗಳ ಒಕ್ಕೂಟದ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ, ವಿಜಯವಾಣಿ ಪತ್ರಿಕೆ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ , ಇಂದುಮುಂಜಾನೆ ಪತ್ರಿಕೆ ಸಂಪಾದಕ ಗುರುರಾಜ ಹೂಗಾರ , ಕಿಮ್ಸ್ ಪ್ರಾಧ್ಯಾಪಕಿ ಡಾ. ವೀಣಾ ಕಾರಟಗಿ ಆಗಮಿಸಿದ್ದರು. ಅತಿಥಿಗಳಾಗಿ ವಿ.ಜಿ ಪಾಟೀಲ , ಎಂ.ಎಚ್ ಚಳ್ಳಮರದ ಶೇಖ್ ಪಾಲ್ಗೊಂಡಿದ್ದರು. ಆಡಳಿತಾಧಿಕಾರಿ ದಿನೇಶ ಜೈನ ಕಾರ್ಯಕ್ರಮ ನಿರೂಪಿಸಿದರು.