ಸತತ ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯ

ಹುಳಿಯಾರು, ಜು. ೨೦- ಪಟ್ಟಣದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಕೇಶವ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಕೇಶವ ಶಾಲಾ ಕುಟುಂಬ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸಾಧನ ಶಿಕ್ಷಣ ಸಂಸ್ಥೆಯ ಡಾ.ಆರ್.ಎಲ್.ರಮೇಶ್‌ಬಾಬು ಮಾತನಾಡಿ, ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾಳು ಮಾಡಬೇಡದಿರೋ ಹುಚ್ಚಪ್ಪಗಳಿರಾ ಎಂಬ ವಿಷಯವನ್ನು ವಿವರಿಸುತ್ತಾ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸತತವಾದ ಪ್ರಯತ್ನ ಮಾಡಿದರೆ ಮಾತ್ರ ಆ ವ್ಯಕ್ತಿ ಉನ್ನತ ಸ್ಥಾನಕ್ಕೇರುತ್ತಾನೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮಾರ್ಪಟ್ಟು ಒಳ್ಳೆಯ ಹೆಸರು ಹಾಗೂ ಹಣ ಸಂಪಾದಿಸುತ್ತಾನೆ ಎಂದರು.
ಶಿಕ್ಷಣ ತಜ್ಞ ಡಾ.ಯಾ.ಚಿ.ದೊಡ್ಡಯ್ಯ ಮಾತನಾಡಿ, ವಿದ್ಯಾವಂತ ಮತ್ತು ಅವಿದ್ಯಾವಂತ ವ್ಯಕ್ತಿ ಇವರು ಆಡುವ ಮಾತಿನ ವ್ಯತ್ಯಾಸವನ್ನು ತಿಳಿಸುತ್ತಾ ರೆಪ್ಪೆ ತೆರೆದರೆ ಜನನ, ರೆಪ್ಪೆ ಮುಚ್ಚಿದರೆ ಮರಣ, ಕಣ್ಣು ಮಿಟಿಕಿಸುವುದೇ ಜೀವನ. ಮನುಷ್ಯನ ಜೀವನ ಎಂದರೆ ಕಣ್ಣು ಮಿಡಿಕಿಸುವಷ್ಟು ಮಾತ್ರ ಎಂದು ತಿಳಿಸಿದರು.
ಮಾತು ಮಾಣಿಕ್ಯ ಇದ್ದ ಹಾಗೆ. ಮಾತಿಗೆ ಬೆಲೆ ಕಟ್ಟಲಾಗುವುದಿಲ್ಲ. ಅಮೂಲ್ಯವಾದ ಮಾತನ್ನು ಬಳಸುವ ರೀತಿ ಇದೆ. ಪ್ರತಿಯೊಬ್ಬ ಮನುಷ್ಯನ ಮನಸ್ಸನ್ನು ಕರಗಿಸುವ ಸ್ಥಿತಿಯನ್ನು ಹೊಂದಿರುತ್ತದೆ. ಹಾಗಾಗಿ ಕೇಶವ ಶಾಲಾ ಕುಟುಂಬ ಮಿಲನದ ಈ ಸಂದರ್ಭದಲ್ಲಿ ನೀವೆಲ್ಲರೂ ಒಳ್ಳೆಯ ಸಂಕಲ್ಪ ಮಾಡಿದರೆ ಮುಂದಿನ ದಿನಗಳಲ್ಲಿ ಈ ಶಾಲೆಯ ವ್ಯವಸ್ಥೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದರು.
ಪ್ರಕೃತಿಯಿಂದ ಕಲಿಯಬೇಕಾದ ಅಂಶದ ಬಗ್ಗೆ ತಿಳಿಸುತ್ತಾ, ತೆನೆ ಬಿಟ್ಟು ಭತ್ತ ಬಾಗುತ್ತದೆ ಗೊನೆ ಬಿಟ್ಟು ಬಾಳೆಯೂ ಬಾಗುತ್ತದೆ, ಫಲ ಬಿಟ್ಟು ಮಾವು ಬಾಗುತ್ತದೆ ಆದರೆ ಏನೇನೂ ಇಲ್ಲದ ಜಂಬದ ಜೀವ ಸದಾ ಬೀಗುತ್ತದೆ ಎಂದರು.
ಮಕ್ಕಳ ಮನಶಾಸ್ತ್ರ ತಜ್ಞ ಸಿ.ಸಿ.ಪಾವಟೆ ಮಾತನಾಡಿ, ಮಗುವನ್ನು ವಿದ್ಯಾವಂತ ಮಕ್ಕಳನ್ನಾಗಿ ಮಾಡುವ ಬದಲು ಬುದ್ಧಿವಂತರನ್ನಾಗಿ ಮಾಡಿ. ಮಕ್ಕಳು ಹೊರಗಡೆ ಆಡಲು ಬಿಡಿ ಮಕ್ಕಳಿಗೆ ಮೊದಲು ಪ್ರಪಂಚದ ಜ್ಞಾನ ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಡಿ. ಮಕ್ಕಳಿಗೆ ತಂದೆ-ತಾಯಿಯ ವರಮಾನ ತಿಳಿಸಿ ನಂತರ ಮಕ್ಕಳಿಗೆ ಅದರ ಬಗ್ಗೆ ತಿಳಿ ಹೇಳಿ ಆದಾಯ ಹೇಗಿದೆ ಅದರ ಬಗ್ಗೆ ಖರ್ಚು ಮಾಡುವಂತೆ ತಿಳಿಸಲಾಯಿತು.
ಮಕ್ಕಳಿಗೆ ತಾಯಿಯ ಪಾತ್ರ ಪ್ರಮುಖವಾದದ್ದು. ಮಕ್ಕಳಿಗೆ ತಾಯಿ ಏನು ಕಲಿಸುತ್ತಾಳೋ ಮಗು ಹಾಗೆ ಕಲಿಯುತ್ತಾ ಹೋಗುತ್ತದೆ. ಮಕ್ಕಳು ತಾಯಿಯ ಗರ್ಭದೊಳಗೆ ಒಳ್ಳೆಯ ವಿಚಾರಗಳು ಹಾಗೂ ಕೆಟ್ಟ ವಿಚಾರಗಳು ಎರಡನ್ನೂ ಕೂಡಾ ಆಲಿಸುತ್ತಾ ಹೋಗುತ್ತದೆ. ತಂದೆ-ತಾಯಂದಿರು ಮಕ್ಕಳೊಂದಿಗೆ ಹೆಚ್ಚಿನ ಬಾಂಧವ್ಯನ್ನು ಬೆಳೆಸಿಕೊಳ್ಳಬೇಕೆಂದರೆ ಮೊದಲು ಮೊಬೈಲ್ ಹಾಗೂ ಟಿವಿಯನ್ನು ಹೆಚ್ಚಾಗಿ ಬಳಸುವ ಬದಲು ಮಕ್ಕಳೊಂದಿಗೆ ಕುಳಿತುಕೊಂಡು ವಿಚಾರ ವಿನಿಮಯ ಮಾಡಬೇಕು. ಪೋಷಕರು ಧಾರಾವಾಹಿ ಹಾಗೂ ಸಿನಿಮಾವನ್ನು ಮಕ್ಕಳೊಂದಿಗೆ ನೋಡುವುದನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಿರ್ಮಾಣ ಎಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಾಗರಬಾವಿ ಬೆಂಗಳೂರು ಇದರ ಸಂಸ್ಥಾಪಕ ಓ.ಮೋಹನ್‌ಕುಮಾರ್ ಮಾತನಾಡಿ, ಮಕ್ಕಳ ಇಚ್ಛೆಗೆ ತಕ್ಕಂತೆ ಪೋಷಕರು ಪ್ರೋತ್ಸಾಹ ನೀಡಬೇಕು. ಮಕ್ಕಳಿಗೆ ಕುಟುಂಬದಲ್ಲಿ ನಡೆಯುವ ಹಾಗೂ ಹೋಗುಗಳ ಬಗ್ಗೆ ವಿಚಾರವನ್ನು ಆಗಿಂದಾಗೆ ತಿಳಿಸಬೇಕು. ಇದರ ಜತೆಗೆ ಮಕ್ಕಳಿಗೆ ತಂ- ತಾಯಂದಿರು ಉತ್ತಮ ಸಂಸ್ಕಾರ ಬೆಳೆಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಶವ ವಿದ್ಯಾಮಂದಿರ ಶಾಲೆಯ ಅಧ್ಯಕ್ಷ ಟಿ.ಜಯಣ್ಣ ಮಾತನಾಡಿ, ವಿದ್ಯೆಯ ಮಹತ್ವ ಹಾಗೂ ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯ ಹೇಗೆ ಇರಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಮಾಲೀಕರಾದ ಟಿ.ಆರ್.ನಾಗೇಶ್, ಹು.ಲಾ.ವೆಂಕಟೇಶ್ ಗುರೂಜಿ, ಸಾಧನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಬಲರಾಮ್, ನಾಗರಾಜ್ ಶೆಟ್ಟಿ, ನಟರಾಜ ಶೆಟ್ಟಿ, ಮಂಜುನಾಥ್ ಶರ್ಮ, ವಕೀಲರಾದ ನಿಜಲಿಂಗಪ್ಪ, ಸೋಮಶೇಖರ್, ಶೇಖರ್, ಶ್ರೀ ಕೇಶವ ವಿದ್ಯಾ ಮಂದಿರ ಟ್ರಸ್ಟಿನ ಉಪಾಧ್ಯಕ್ಷ ಕೆ.ಎಸ್.ಈಶ್ವರಯ್ಯ, ಕಾರ್ಯದರ್ಶಿ ಎಚ್.ಟಿ.ದಾಸಪ್ಪ, ಖಜಾಂಚಿ ಎಂ.ವಿ.ರಮೇಶ್, ಟ್ರಸ್ಟಿಗಳಾದ ಎಚ್.ಎನ್.ಸತೀಶ್, ಆರ್.ಚನ್ನಬಸವಯ್ಯ, ಹೆಚ್.ಎಸ್.ರಘುನಾಥ್ ಮತ್ತಿತರರು ಉಪಸ್ಥಿತರಿದ್ದರು.