ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ಒಡೆದು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ

ಕೆ.ಆರ್.ಪೇಟೆ: ಆ.04:- ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ 5-6 ಕೆರೆಗಳು ಕೋಡಿ ಬಿದ್ದ ಪರಿಣಾಮ ಅಘಲಯ ಕೆರೆ, ಲೋಕನಹಳ್ಳಿ ಕೆರೆ, ದೊಡ್ಡಸೋಮನಹಳ್ಳಿ ಕೆರೆಗಳು ಒಡೆದು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ.
ಸಂತೇಬಾಚಹಳ್ಳಿ ಹೋಬಳಿಯಲ್ಲಿ ಗೊರವಿಕೆರೆ ಸೇರಿದಂತೆ ಹಲವು ಕೆರೆಗಳು ನೀರಿನ ಪ್ರಮಾಣವನ್ನು ತಡೆಯಲಾಗದೇ ಕೆರೆಯ ಏರಿಯು ಒಡೆದಿವೆ. ಇದರಿಂದಾಗಿ ಕೆರೆ ಏರಿಯ ಹಿಂಭಾಗದಲ್ಲಿದ್ದ ನೂರಾರು ಎಕರೆ ಜಮೀನುಗಳಲ್ಲಿ ಬೆಳೆದಿದ್ದ ತೆಂಗು, ಅಡಿಕೆ, ಬಾಳೆ, ಭತ್ತ, ಧವಸಧಾನ್ಯಗಳು ಸೇರಿದಂತೆ ವಿವಿಧ ರೀತಿಯ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ. ಸಂತೇಬಾಚಹಳ್ಳಿ ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ ಸಂತೇಬಾಚಹಳ್ಳಿ ಕೆರೆಯ ರಸ್ತೆಯ ಏರಿಯ ಮೇಲೆ ನೀರು ಹರಿದಿರುವುದರಿಂದ ಕೆರೆಯ ಏರಿ ಒಡೆಯುವ ಆತಂಕ ಎದುರಾಗಿದೆ. ಮಾವಿನಕಟ್ಟೆಕೊಪ್ಪಲು ಗ್ರಾಮದ ಕೆರೆ ನೀರು ತೆಂಗಿನ ತೋಟಗಳಿಗೆ ನುಗ್ಗಿ ಅಪಾರ ಹಾಣಿಯನ್ನು ಉಂಟುಮಾಡಿದೆ. ನಾಯಸಿಂಗನಹಳ್ಳಿ ಗ್ರಾಮದ ನಿವೃತ್ತ ಇಂಜಿನಿಯರ್ ಮನೆಯಲ್ಲಿನ ಕುರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅಲ್ಲದೇ ಮನೆಯ ಮುಂಭಾಗ ಇಡಲಾಗಿದ್ದ ಸಾವಿರಾರು ತೆಂಗಿನ ಕಾಯಿಗಳು ನೀರುಪಾಲಾಗಿವೆ. ಇತಿಹಾಸ ಪ್ರಸಿದ್ದ ಅಘಲಯ ಕೆರೆಯ ನೀರಿನ ಪ್ರಮಾಣದಿಂದಾಗಿ ಶ್ರವಣಬೆಳಗೊಳ-ಕೆ,ಆರ್,ಪೇಟೆ ಸಂಪರ್ಕ ಕಡಿತವಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಂತೇಬಾಚಹಳ್ಳಿ ಹೋಬಳಿಯ ಕೆರೆಕಟ್ಟೆಗಳು, ಸೇತುವೆಗಳು ಹೆಚ್ಚಿನ ಹಾನಿಗೊಳಗಾಗಿದ್ದು ಕೆಲವು ಕಡೆಗಳಲ್ಲಿ ಸೇತುವೆಗಳ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತೀ ವರ್ಷ ಮಳೆಗಾಲ ಬಂದಾಗ ಎದುರಾಗುವ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸದೇ ಇರುವ ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರ ಭೇಟಿ.
ಮಳೆಹಾನಿಯಿಂದ ಸಾಕಷ್ಟು ಹಾನಿಗೊಳಗಾಗಿರುವ ಸ್ಥಳಗಳಿಗೆ ಸಚಿವ ನಾರಾಯಣಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಷ್ಟ ಅನುಭವಿಸಿರುವ ರೈತರುಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳ ತುರ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಯ ಪ್ರಮಾಣ ಕಡಿಮೆಯಾದ ನಂತರ ಕೆರೆಗಳನ್ನು ರಿಪೇರಿ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪ ಸೇರಿದಂತೆ ಹಲವರು ಹಾಜರಿದ್ದರು.