ಸಣ್ಣ ಹಿಡುವಳಿದಾರರು ಸಬಲೀಕರಣಗೊಳ್ಳಲಿ : ಡಾ. ನವೀನಕುಮಾರ

ಬೀದರ:ಎ.2: ಇಂದಿನ ರೈತರು ಕೃಷಿಯನ್ನು ಸಾಂಪ್ರದಾಯಿಕ ಕಾರ್ಯ ಎಂದು ತಿಳಿದು ಮಾಡುತ್ತಿದ್ದಾರೆ. ಆದರೆ ಕೃಷಿಯನ್ನು ಸಂಪ್ರದಾಯ ಎಂದು ತಿಳಿಯದೇ ಅದಕ್ಕೆ ಆಧುನಿಕ ಸ್ಪರ್ಶ ನೀಡಿ ವ್ಯಾಪಾರೀಕರಣಗೊಳ್ಳಬೇಕು. ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರು ಸಬಲೀಕರಣಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಡಾ. ನವೀನಕುಮಾರ ನುಡಿದರು.
ನಗರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರೈತ ಮೋರ್ಚಾ ವತಿಯಿಂದ ರೈತ ಉತ್ಪಾದಕರ ಸಂಸ್ಥೆಗಳ ಜಾಗೃತಿ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮೋದಿಯವರ ಬಗ್ಗೆ ನಾವು ಕೇವಲ ಭಾವನಾತ್ಮಕ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಸಾಲದು. ಬದಲಾಗಿ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಯಶಸ್ವಿಯಾಗಿ ರೈತರ ಮನೆಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಭಾರತದಲ್ಲಿ 14 ಕೋಟಿ ಸಣ್ಣ ಹಿಡುವಳಿದಾರರಿದ್ದಾರೆ. ಅದರಲ್ಲಿ 9 ಕೋಟಿ ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಹಿಡುವಳಿದಾರರಿದ್ದಾರೆ. ಅಂತಹ ಸಮಸ್ಯಾತ್ಮಕ ರೈತರನ್ನೇ ನಾವು ಬಂಡವಾಳ ಮಾಡಿಕೊಂಡು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಬೇಕಾಗಿದೆ. ರೈತರು ಕೂಡಾ ತಮ್ಮ ಜೀವನವನ್ನು ಯಾಂತ್ರಿಕರಣಗೊಳಿಸಿಕೊಳ್ಳಬೇಕು. ಆದಾಯ ದ್ವಿಗುಣಗೊಳ್ಳಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ಸಿಗಬೇಕು. ದಾಸ್ತಾನು ವ್ಯವಸ್ಥೆ ಆಗಬೇಕು. ಶೈಥೀಲಿಕರಣ ಆಗಬೇಕು. ಇದು ರೈತ ಉತ್ಪಾದಕ ಸಂಸ್ಥೆಗಳ ಪ್ರಮುಖ ಉದ್ದೇಶವಾಗಿದೆ. ಇದನ್ನು ನಮ್ಮ ಕಾರ್ಯಕರ್ತರು ಜವಾಬ್ದಾರಿಯಿಂದ ಪ್ರತೀ 50 ಹಳ್ಳಿಗಳಿಗೆ ಒಬ್ಬೊಬ್ಬರಂತೆ ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಬೇಕು. ಅವುಗಳನ್ನು ಪಟ್ಟಿಮಾಡಿ ಪರಿಹಾರ ಕೊಡಿಸಲು ಯತ್ನಿಸಬೇಕು. ಪ್ರತೀ ಹಳ್ಳಿಗಳಿಗೆ ರೈತ ಆಸಕ್ತಿ ಕೇಂದ್ರ ಸ್ಥಾಪಿಸಿ ಬೆಳೆಗಳನ್ನು ಪರಿಷ್ಕರಣೆ ಮಾಡಿ ಮೌಲ್ಯವರ್ಧನೆ ಮಾಡಬೇಕು ಎಂದು ಡಾ. ನವೀನಕುಮಾರ ತಿಳಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗ ಗೌಡರು, ಮೋರ್ಚಾದ ಬೀದರ ಜಿಲ್ಲಾ ಉಸ್ತುವಾರಿಗಳಾದ ಧರ್ಮಣ್ಣ ದೊಡ್ಡಮನಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕುಶಾಲರಾವ ಪಾಟೀಲ ಗಾದಗಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಾಂತವೀರ ಬಿ.ಕೇಸ್‍ಕರ್, ಕಾರ್ಯಾಲಯ ಕಾರ್ಯದರ್ಶಿ ಶಶಿಕುಮಾರ, ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹರಕಂಟಿ ಚಿಕ್ಕಬಸಪ್ಪ ಬಿರಾದಾರ, ಬಸವರಾಜ ಪಾರಾ, ಪ್ರಕಾಶ ಬಿರಾದಾರ, ಶಿವರುದ್ರಪ್ಪ, ಸಂತೋಷ ಪಾಟೀಲ, ವೆಂಕಟರಾವ, ದೀಪಕ ಮನ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.