ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಅಗತ್ಯ

ಕಲಬುರಗಿ,ಜೂ.27: ರಾಷ್ಟ್ರದ ಅಭಿವೃದ್ಧಿಯಲ್ಲಿ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳ ಪಾತ್ರ ಪ್ರಮುಖವಾಗಿದೆ. ರಾಜ್ಯದಲ್ಲಿ 565538 ಸಣ್ಣ ಕೈಗಾರಿಕಗಳಿದ್ದು, ಇವುಗಳಿಂದ 1 ಕೋಟಿ ಜನರಿಗೆ ಉದ್ಯೋಗಗಳು ದೊರೆತಿವೆ. ವಿವಿಧ ಕಾರಣಗಳಿಂದ ಸಣ್ಣ ಕೈಗಾರಿಕೆಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಕೈಗಾರಿಕಾ ನೀತಿಗಳನ್ನು ರಚಿಸಿ, ನಷ್ಟದಲ್ಲಿರುವ ಅನೇಕ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯವಾಗಬೇಕಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಜೇವರ್ಗಿ ಪಟ್ಟಣದ ಬಸ್ ಸ್ಟಾಂಡ್ ಸಮೀಪವಿರುವ ‘ನರೇಂದ್ರ ಪದವಿ ಪೂರ್ವ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ವಿಶ್ವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುಎಸ್‍ಎ, ಕೆನಡಾ, ಸಿಂಗಾಪುರ, ಅರ್ಜೈಂಟೈನಾ ಸೇರಿದಂತೆ ಮುಂತಾದ ರಾಷ್ಟ್ರಗಳು, ನಮ್ಮ ದೇಶದ ಆಂಧ್ರಪ್ರದೇಶ, ಹರಿಯಾಣ, ಗುಜರಾತ, ಮಧ್ಯಪ್ರದೇಶ, ತಮಿಳುನಾಡು ರಾಜ್ಯಗಳು ಎಂಎಸ್‍ಎಂ ನೀತಿಯನ್ನು ರೂಪಿಸಿವೆ. ಆದ್ದರಿಂದ ಅಲ್ಲಿ ಸಣ್ಣ ಕೈಗಾರಿಕಗಳ ಬೆಳವಣಿಗೆ ಹೆಚ್ಚಾಗಿದೆ. ಸಣ್ಣ ಕೈಗಾರಿಕೆಗಳು ಸ್ವಲ್ಪ ಬಂಡವಾಳದೊಂದಿಗೆ ಆರಂಭಿಸಬಹುದಾಗಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ದೊರಕಿಸಿಕೊಡಲು ಪೂರಕವಾಗಿವೆ. ಅನೇಕ ಸಣ್ಣ ಕೈಗಾರಿಕೆಗಳ ಪರಿಸರ ಸ್ನೇಹಿಯಾಗಿರುತ್ತದೆ ಅಂದರೆ ಮಾಲಿನ್ಯರಹಿತವಾಗಿರುತ್ತವೆ. ವಿದ್ಯುತ್ ಅಭಾವ, ನೀರಿನ ಅಲಭ್ಯತೆ, ತೆರಿಗೆ ರಿಯಾಯತಿ ಸೌಲಭ್ಯ ದೊರೆಯದಿರುವುದು, ಮೂಲಭೂತ ಸೌಕರ್ಯಗಳು ಸೇರಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರಗಳನ್ನು ನೀಡಿ ಅಭಿವೃದ್ಧಗೊಳಿಸಬೇಕು. ಕಕ ಭಾಗದಲ್ಲಿ ಸಣ್ಣ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ದೇವೀಂದ್ರ ಗುಡುರ ಮಾತನಾಡಿ, ನಿರುದ್ಯೋಗಿ ಪದವಿಧರರು ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಪಡೆದು ಸ್ವಂತ ಕೈಗಾರಿಕೆ ಸ್ಥಾಪನೆಯತ್ತ ಚಿತ್ತ ಹರಿಸಬೇಕಾಗಿದೆ. ನಿರಂತರವಾಗಿ ಶ್ರಮ ಹಾಕಿ, ಸಮಯ ಮತ್ತು ಕಾಯಕ ಪ್ರಜ್ಞೆಯಿಂದ, ನಿಮ್ಮ ಸಾಮಥ್ರ್ಯ ಅರಿತು, ಯೋಜನಾಬದ್ದತೆಯಿಂದ ಕಾರ್ಯನಿರ್ವಹಿಸಿದರೆ ಸಣ್ಣ ಕೈಗಾರಿಕೆಗಳು ಸಫಲವಾಗಲು ಸಾಧ್ಯವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಬಿ.ಗುತ್ತೇದಾರ, ಕಾಲೇಜಿನ ಉಪನ್ಯಾಸಕರಾದ ರಾಯಣ್ಣ ಕಟ್ಟಿಮನಿ, ಮಲ್ಲಿಕಾರ್ಜುನ ಭಾಸಗಿ, ನಬಿಪಟೇಲ್ ಈಜೇರಿ, ಶಾಂತಕುಮಾರ ಯಲಗೂಡ್, ಶಿವಾನಂದ ಸಿಂಪಿ, ಕಲ್ಪನಾರೆಡ್ಡಿ, ಮೌನೇಶ್ ಸೋಮನಾಥಹಳ್ಳಿ, ವೀರೇಶ ಗೋಗಿ, ಬಸವರಾಜ ಸೊನ್ನ್, ದ್ಯಾವಣ್ಣ ಸೋಮನಾಥಹಳ್ಳಿ, ಸರಸ್ವತಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.