ಸಣ್ಣ ಕೆಲಸಕ್ಕೂ ಪ್ರಚಾರ ಪಡೆಯುವ ಪ್ರಧಾನಿ ನರೇಂದ್ರ ಮೋದಿ:ಖರ್ಗೆ

ಬೀದರ್ :ಫೆ.21: ನನಗೆ ಯಾರೂ ಕೇಳದಿದ್ದರೂ ಕೂಡ ನಾನು ಮಂತ್ರಿಯಾಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ಎಂದಿಗೂ ನಾನು ಪ್ರಚಾರ ಮಾಡಿಕೊಂಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಸಣ್ಣ ಕೆಲಸಕ್ಕೂ ಬಹಳಷ್ಟು ಪ್ರಚಾರ ಪಡೆಯುತ್ತಾರೆ ಎಂದು ಎಐಸಿಸಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‍ನ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಹೇಳಿದರು.

ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಹೊಸ ರೈಲ್ವೆ ಸಂಚಾರಕ್ಕೆ ಚಾಲನೆ ನೀಡಲು ಸ್ವತಃ ಮೋದಿಯವರೇ ಹೋಗುತ್ತಾರೆ. ಈ ಭಾಗದಲ್ಲಿ 10 ವರ್ಷದಲ್ಲಿ ಯಾರೂ ಮಾಡದ ಕೆಲಸ ನಮ್ಮ ಸರ್ಕಾರ ಮಾಡಿದೆ. ನಮ್ಮಲ್ಲಿ ಇದ್ದ ಅಭಿವೃದ್ಧಿ ಕೆಲಸಗಳನ್ನೂ ಮೋದಿಜಿಯವರು ನಿಲ್ಲಿಸಿದ್ದಾರೆ. ಅದಕ್ಕೆ ಕಾರಣ ಏನು ಅಂತ ಗೊತ್ತಾಗುತ್ತಿಲ್ಲ. ಯಾದಗಿರಿಯಲ್ಲಿ ಕಾರ್ಖಾನೆ ದೊಡ್ಡದಾಗಿ ಮಾಡಿ ಕನಿಷ್ಟ 20 ಸಾವಿರ ಜನರು ಕೆಲಸ ಮಾಡಬೇಕೆಂದು ಜರ್ಮನ್ ಬೋಗಿ ಕಾರ್ಖಾನೆ ನಾನು ಮಾಡಿಸಿದ್ದೆ. ಅದು ಅಲ್ಲಿಯೇ ನಿಂತಿದೆ. ಸ್ವಲ್ಪ ಸ್ವಲ್ಪ ನಡೆಯುತ್ತಿದೆ ಎಂದ ಅವರು ಇಎಸ್‍ಐ ಆಸ್ಪತ್ರೆಯನ್ನು ಏಮ್ಸ್ ಆಸ್ಪತ್ರೆಯನ್ನಾಗಿ ಮಾಡಬೇಕೆಂದರೆ ಅದನ್ನೂ ನಿಲ್ಲಿಸುವ ಕೆಲಸ ಮಾಡಿದ್ದಾರೆ. ನಾವು ಮಾಡಬೇಕೆನ್ನುವ ಕೆಲಸ ಅವರು ನಿಲ್ಲಿಸುತ್ತಿದ್ದಾರೆ. ಅಲ್ಲದೆ ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ನಾಶ ಮಾಡಬೇಕು, ಇರುಚು, ತಿರುಚು ಮಾಡಲು ಮೋದಿ ಸರ್ಕಾರ ಒಂದೊಂದಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

`ಎಲ್ಲಿದೆ ಗ್ಯಾರಂಟಿ’
ದೇಶದಲ್ಲಿನ ಸರ್ಕಾರಿ ಬ್ಯಾಂಕ್‍ನ 13 ಲಕ್ಷ ಕೋಟಿ ಹಣ ಮೋದಿ ಸರ್ಕಾರ ಶ್ರೀಮಂತರಿಗೆ ಕೊಟ್ಟಿದೆ. ಬಡವರು 10-20 ಸಾವಿರ ಬ್ಯಾಂಕ್‍ನಿಂದ ಹಣ ಪಡೆದರೆ ಅವರ ಮನೆ, ಹೊಲ ಹರಾಜು ಹಾಕುತ್ತಾರೆ. ಆದರೆ, ಇಂತಹ ದೊಡ್ಡ ಹಣ ಪಡೆಯುವವರನ್ನು ಈ ರೀತಿ ಏಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆಂದು ಹೇಳಿದರು. ಕೊಟ್ಟಿದ್ದಾರಾ? ಜನರು ಇದನ್ನ ಅವರಿಗೆ ಕೇಳಬೇಕು. 15 ಲಕ್ಷ ಕಪ್ಪು ಹಣ ಖಾತೆಗೆ ಹಾಕಿದ್ದಾರಾ? ಚುನಾವಣೆಗೂ ಮುನ್ನ ನೀಡಿರುವ ಮೋದಿಜಿಯವರ ಗ್ಯಾರಂಟಿ ಎಲ್ಲಿದೆ ಎಂದು ಪ್ರಶ್ನಿಸಿದರು. ಸುಳ್ಳು ಹೇಳಿ ಹೇಳಿ ಮೋದಿ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಜಕೀಯ ಜೀವನ ಕೊಟ್ಟಿರುವ ಗುರುಮಠಕಲ್ ಹಾಗೂ ಕಲಬುರಗಿ ಮೇಲೆ ನನಗೆ ಬಹಳ ಪ್ರೀತಿ ಇದ್ದರೂ ಕೂಡ ನಾನು ಹುಟ್ಟಿರುವ ಬೀದರ್ ಜಿಲ್ಲೆಯನ್ನು ಎಂದೂ ಮರೆಯುವುದಿಲ್ಲ ಎಂದು ಹೇಳಿದರು. ಈ ಭಾಗದ ಅನ್ಯ ಪಕ್ಷದಲ್ಲಿ ಅನೇಕರಿದ್ದರೂ ಕೂಡ ಈ ಭಾಗದ ಅಭಿವೃದ್ಧಿ ಬಗ್ಗೆ ಒಕ್ಕಟ್ಟಿನಿಂದ ಮಾತನಾಡುವ ಜನರು ಇಲ್ಲಿದ್ದಾರೆ. ಅವರೆಲ್ಲರ ಶ್ರೇಯದಿಂದಲೇ ಈ ಭಾಗವನ್ನು ಸ್ವಲ್ಪ ಮಟ್ಟಿಗೆ ನಾವು ಅಭಿವೃದ್ಧಿ ಪಡಿಸಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ ಎಂದ ನುಡಿದರು.

`ಅಭಿವೃದ್ಧಿಗಾಗಿ 371(ಜೆ) ಜಾರಿಗೆ’
ಈ ಭಾಗದಲ್ಲಿ ಸ್ವಾತಂತ್ರ ಪೂರ್ವ ಒಂದೇ ಒಂದು ಇಂಟರಮಿಡಿಯಟ್ ಕಾಲೇಜು ಕಲಬುರಗಿಯಲ್ಲಿತ್ತು. ಸ್ವಾತಂತ್ರದ ಬಳಿಕ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನೇಕ ಕಾಲೇಜುಗಳು ಸ್ಥಾಪಿಸಿದ್ದೇವೆ. ಅದೇ ಕೊಡುಗೆ ಈ ಭಾಗದಲ್ಲಿ ದೊಡ್ಡದಾಗಿ ನಿಂತಿದೆ. ಇಡಿ ದೇಶದಲ್ಲಿ ಪ್ರಥಮವಾಗಿ ಬಂದಿರುವ ನಾಲ್ಕು ಮೆಡಿಕಲ್ ಕಾಲೇಜುಗಳಲ್ಲಿ ಒಂದು ಕಲಬುರಗಿಯಲ್ಲಿಯೂ ಸ್ಥಾಪಿಸಲಾಗಿತ್ತು ಎಂದು ತಿಳಿಸಿದರು. ನಾವು ಏನಾದರೂ ಆರ್ಥಿಕ ಬಲಶಾಲಿ ಇದ್ದರೆ ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬಹುದು. ಇಲ್ಲದಿದ್ದರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬಹುದು. ಸರ್ಕಾರಿ ಶಾಲೆಯಲ್ಲಿಯೂ ಎಲ್ಲಾ ವಿಷಯದ ಶಿಕ್ಷಕರಿದ್ದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಈ ಭಾಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಈ ಭಾಗ ಅತ್ಯಂತ ಹಿಂದುಳಿದೆ. ಈ ನಿಟ್ಟಿನಲ್ಲಿ ನಾವು 371(ಜೆ) ಜಾರಿಗೆ ತಂದಿದ್ದೇವೆ. ಬಹಳಷ್ಟು ಜನರು ಭಾಷಣ ಮಾಡಿದರೆ ಹೋರತು ಕಾನೂನು ಜಾರಿಗೆ ತರುತ್ತಿರಲಿಲ್ಲ ಎಂದು ನುಡಿದರು.


`ಕಾಂಗ್ರೆಸ್‍ಗೆ ಬೆಂಬಲ ಕೊಡಿ’
ನಾವು ಮೊದಲು ಜಗಳವಾಡುವುದನ್ನು ಬಿಡಬೇಕು. ಇದೆ ರೀತಿ ಪ್ರೀತಿ ವಿಶ್ವಾಸವಿಟ್ಟು ಬರುವ ಚುನಾವಣೆಯಲ್ಲಿ ಜನರು ನಮಗೆ ಸಹಕಾರ ಕೊಡಬೇಕು. ಅಂದಾಗ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲು ಸಾಧ್ಯ. ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲು ಎಲ್ಲರೂ ಕಾಂಗ್ರೆಸ್‍ಗೆ ಬೆಂಬಲ ಕೊಡಲೇಬೇಕು.
:- ಡಾ. ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷರು.