ಸಣ್ಣ-ಅತಿಸಣ್ಣ ರೈತರಿಗೆ ಸಹಾಯ ಧನ ವಿತರಿಸಲು ಆಗ್ರಹ

ಪಾವಗಡ, ಜು. ೨೦- ವಾಣಿಜ್ಯ ಬೆಳೆಗಳಿಗೆ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೆರವಿಗೆ ಬಂದು ಸಣ್ಣ, ಅತಿಸಣ್ಣ ರೈತರು ಬೆಳೆಯುವ ಆಹಾರ ಧಾನ್ಯಗಳಾದ ರಾಗಿ, ಭತ್ತ, ಗೋಧಿ, ಜೋಳ, ಶೆಂಗಾ ಇತರೆ ೨೪ ಬೆಳೆಗಳಿಗೆ ೫ ಎಕರೆಯೊಳಗೆ ಕನಿಷ್ಟ ಸಹಾಯ ಧನ ವಿತರಿಸಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾದ್ಯಕ್ಷ ವಿ. ನಾಗಭೂಷಣರೆಡ್ಡಿ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರದ ಅದೇಶವನ್ನು ವಿಸ್ತರಿಸಿ ವಾಣಿಜ್ಯ ಬೆಳೆಗಳಿಗೆ ಕೊಟ್ಟ ಹಾಗೆ ಆಹಾರ ಧಾನ್ಯಗಳಿಗೂ ಕೊಡಬೇಕು ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳು, ಅಧಿಕಾರಿಗಳು ಕೃಷಿಗೆ ತಗಲುವ ಕೂಲಿಯನ್ನು ಬೆಳೆವಾರು ಕೂಲಿ ಹಣ ಕೊಡಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಮುಖಂಡ ಮಹಮದ್‌ಇಸ್ಮಾಯಿಲ್ ಮಾತನಾಡಿ, ಹೀಗಾಗಲೆ ಎರಡು ಬಾರಿ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಅಮ್‌ಆದ್ಮಿ ಪಕ್ಷದ ಎಂ. ಗೋಪಾಲ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿ ತಹಶೀಲ್ದಾರ್ ಡಿ. ವರದರಾಜು ಮಾತನಾಡಿ, ಈ ಮನವಿಯನ್ನು ಸಂಬಂದಪಟ್ಟವರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.