ಸಡಗರ ಸಂಭ್ರಮದ ಶ್ರೀ ರಾಮನವಮಿ

ಮೈಸೂರು,ಏ.21:- ಇಂದು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನ, ಹಿಂದೂ ಧರ್ಮೀಯರಿಗೆ ಇಂದು ವಿಶೆಷ ದಿನ.
ಅಂದರೆ ಶ್ರೀರಾಮನವಮಿ. ನವಮಿ ತಿಥಿಯಂದು ಶ್ರೀರಾಮನ ಜನನವಾಗಿದ್ದು, ಇಂದು ದೇಶಾದ್ಯಂತ ಶ್ರೀರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಆದರೆ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀರಾಮನ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ತಪ್ಪಿಸಲು ದೇವಸ್ಥಾನದ ಮಟ್ಟಿಗಷ್ಟೇ ಸರಳವಾಗಿ ಪೂಜಾದಿ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಲ್ಲಿ ಶ್ರೀರಾಮನ ಜನನವಾಗಿದ್ದು, ಇಂದು ಎಲ್ಲೆಡೆ ರಾಮನವಮಿಯನ್ನು ಆಚರಿಸಲಾಗುತ್ತದೆ. ಇಂದು ಶ್ರೀರಾಮನ ಜೊತೆಗೆ ಸೀತಾ ಮಾತೆ, ತಾಯಿ ದುರ್ಗೆ ಮತ್ತು ಆಂಜನೇಯನನ್ನು ಕೂಡ ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ. ಇಂದು ಭಗವಾನ್ ಶ್ರೀರಾಮನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಜೀವನದಲ್ಲಿ ಯಶಸ್ಸು, ಗೌರವ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತದೆ. ಇಂದು ಚೈತ್ರ ಮಾಸದ ನವರಾತ್ರಿ ಕೂಡ ಸಂಪನ್ನಗೊಳ್ಳಲಿದೆ.
ಮೈಸೂರಿನ ವಿವಿಧ ಬಡಾವಣೆಗಳಲ್ಲಿರುವ ಶ್ರೀರಾಮನ ದೇವಸ್ಥಾನಗಳಲ್ಲಿ ಇಂದು ಶ್ರದ್ಧಾಭಕ್ತಿಯಿಂದ ಶ್ರೀರಾಮನಿಗೆ ಅರ್ಚಕರು ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು. ಕೊರೋನಾ ಹಿನ್ನೆಲೆಯಲ್ಲಿ ಕೆಲವು ದೇವಸ್ಥಾನಗಳಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕಳೆದ ವರ್ಷವೂ ಕೂಡ ಭಕ್ತರಿಗೆ ಶ್ರೀರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಆಗಲೂ ಕೂಡ ಕೊರೋನಾ ಮಹಾಮಾರಿಯು ದೇಶವನ್ನು ಕಾಡಿತ್ತು. ಈ ವರ್ಷವೂ ಕಾಡುತ್ತಿದೆ. ಜಯನಗರ, ಕೆ.ಜಿ.ಕೊಪ್ಪಲು ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಶ್ರೀರಾಮಮಂದಿರಗಳಲ್ಲಿ, ಆಂಜನೇಯನ ಮಂದಿರಗಳಲ್ಲಿ ಪೂಜಾದಿಕಾರ್ಯಗಳು ನಡೆದಿದ್ದು ಕೊರೋನಾ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರತಿವರ್ಷ ನೀಡಲಾಗುವ ಮಜ್ಜಿಗೆ , ಪಾನಕ ವಿತರಣೆಯನ್ನು ಕೈಬಿಡಲಾಗಿದೆ. ಕೆಲವು ದೇವಸ್ಥಾನಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದಿರುವುದು ಕಂಡು ಬಂತು.