ಸಡಗರ, ಸಂಭ್ರಮದಿಂದ ಶ್ರೀ ಮಡಿವಾಳೇಶ್ವರ ಪಲ್ಲಕ್ಕಿ ಉತ್ಸವ

ಬೀದರ್, ಸೆ. 06: ಪ್ರತಿ ವರ್ಷದಂತೆ ಈ ವರ್ಷವೂ ಬೀದರ ನಗರದ ಮಂಗಲಪೇಟ್ ಬಡಾವಣೆಯಲ್ಲಿರುವ ಶ್ರೀ ಮಡಿವಾಳೇಶ್ವರ ಮಂದಿರದಲ್ಲಿ ಶ್ರೀ ಮಡಿವಾಳೇಶ್ವರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ರವಿವಾರ ಶ್ರಾವಣ ಸಮಾಪ್ತಿ ನಿಮಿತ್ತ ಶ್ರೀ ಮಡಿವಾಳೇಶ್ವರರ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮ ಹಾಗೂ ಹರ್ಷೋಲ್ಲಾಸದಿಂದ ನಡೆಯಿತು.

ರವಿವಾರ ಬೆಳಿಗ್ಗೆ 06 ಗಂಟೆಯಿಂದ ಮಂಗಳಾರತಿ, ಅಭಿಷೇಕ, ಪೂಜೆ ಹಾಗೂ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳು ನಡೆದವು. ನಂತರ ಶ್ರೀ ಮಡಿವಾಳೇಶ್ವರ ಪಲ್ಲಕ್ಕಿ ಉತ್ಸವ ಮಂದಿರದ ಆವರಣದಿಂದ ಆರಂಭಗೊಂಡು ಮಂಗಲಪೇಟ್ ಬಡಾವಣೆಯ ವಿವಿಧ ಓಣಿಗಳ ಪ್ರಮುಖ ಮಾರ್ಗಗಳ ಮೂಲಕ ಪುನಃ ಮಂದಿರಕ್ಕೆ ತಲುಪಿ, ಸಮಾವೇಶಗೊಂಡಿತು.

ಮೆರವಣಿಗೆಯುದ್ದಕ್ಕೂ ಬಡಾವಣೆಯ ಶಾಲಾ ಮಕ್ಕಳು ಗಣೇಶನ ಹಾಡಿನ ಮೇಲೆ ಲೇಜೀಮ್ ಮೂಲಕ ನೃತ್ಯ ಮಾಡಿ ಜನಮನ ಸೆಳೆದರು. ಅಲ್ಲದೇ ಮಹಿಳೆಯರು ತಲೆಯ ಮೇಲೆ ತುಂಬಿದ ಕಳಸ ಹೊತ್ತು ಸಾಗಿ ಮೆರವಣಿಗೆಗೆ ಮೆರಗು ತಂದರು. ಅಕ್ಕನ ಬಳಗದ ಮಹಿಳೆಯರು ಬಸವಣ್ಣನ ಹಾಡು ಹಾಡುತ್ತ, ಕೋಲಾಟದ ಮೂಲಕ ನೃತ್ಯ ಪ್ರದರ್ಶಿಸಿದರು. ಅಣ್ಣನ ಬಳಗದವರು ಪಲ್ಲಕ್ಕಿ ಮುಂದೆ ಭಜನೆ ಮಾಡುತ್ತ ಗಮನ ಸೆಳೆದರು. ಮಕ್ಕಳ ಲೇಜೀಮ್ ಹಾಗೂ ನೃತ್ಯ ನೋಡುಗರ ಗಮನ ಸೆಳೆಯಿತು.

ದಸರಾ ಹಬ್ಬದಲ್ಲಿ ಘಟ ಸ್ಥಾಪನೆ ಮಾಡುವ ರೀತಿಯಲ್ಲಿ ಮಂದಿರದ ಪರಿಸರದಲ್ಲಿ ನವದುರ್ಗೆ ಮಾತೆಯರ ಮೂರ್ತಿಗಳು ಪ್ರತಿಷ್ಠಾಪನೆ ಮಾಡಿದ್ದು, ನೋಡುಗರ ಮನ ಸೆಳೆಯುತ್ತಿವೆ.

ಮಂದಿರದ ಅಗ್ನಿಕುಂಡದಲ್ಲಿ ಭಕ್ತರು ತಮ್ಮ ಹರಿಕೆ ತಿರಿಸಿಕೊಂಡರು. ನಂತರ ಭಕ್ತಾದಿಗಳು ಶ್ರೀ ಮಡಿವಾಳೇಶ್ವರ ದೇವರ ದರ್ಶನ ಪಡೆದು, ಪ್ರಸಾದ ಸ್ವಿಕರಿಸಿ ಪುನೀತರಾದರು.

ಶ್ರೀ ಮಡಿವಾಳೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಕಾಶಿನಾಥ ಶೇಟಕಾರ್ ಅವರು ಮಾತನಾಡುತ್ತ, ಪ್ರತಿ ವರ್ಷದಂತೆ ಈ ವರ್ಷವೂ ನಗರದ ಮಂಗಲಪೇಟದಲ್ಲಿರುವ ಶ್ರೀ ಮಡಿವಾಳೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಸಮಾಪ್ತಿ ಕಾರ್ಯಕ್ರಮ ವೈಭವದಿಂ ಆಚರಿಸಲಾಗುತ್ತದೆ. ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಇದ್ದ ಕಾರಣ ಸರಳವಾಗಿ ಕಾರ್ಯಕ್ರಮ ಮಾಡಲಾಗಿತ್ತು. ಈ ವರ್ಷ ಸಡಗರ, ಸಂಭ್ರಮ ಹಾಗೂ ಹರ್ಷೋಲ್ಲಾಸದಿಂದ ಮಂದಿರದ ಪದಾಧಿಕಾರಿಗಳು ಮತ್ತು ಬಡಾವಣೆಯ ಸಾರ್ವಜನಿಕರು ಸೇರಿಕೊಂಡು ಶ್ರಾವಣ ಸಮಾಪ್ತಿ, ಮಡಿವಾಳೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಶ್ರೀ ಮಡಿವಾಳೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ವೀರಯ್ಯ ಸ್ವಾಮಿ ಅವರು ಮಾತನಾಡುತ್ತ, ಕಳೆದ 50 ವರ್ಷಗಳಿಂದ ಶ್ರೀ ಮಡಿವಾಳೇಶ್ವರ ಸೇವಾ ಸಮಿತಿ ಟ್ರಸ್ಟ ವತಿಯಿಂದ ಶ್ರಾವಣ ಮಾಸ ನಿಮಿತ್ತ ಒಂದು ತಿಂಗಳು ಕಾಲ ಅಕ್ಕನ ಮತ್ತು ಅಣ್ಣನ ಬಳಗದವರು ಹಾಗೂ ಸಾರ್ವಜನಿಕರು ಶೃದ್ಧೆ, ಭಕ್ತಿಯಿಂದ ಭಜನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಸಿಕೊಡುತ್ತಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀ ಮಡಿವಾಳೇಶ್ವರ ಸೇವಾ ಸಮಿತಿಯ ಚನ್ನಬಸಯ್ಯ ಸ್ವಾಮಿ, ಉಮೇಶ ಗಾಯತೋಂಡ, ಶಿವರಾಜ ಸ್ವಾಮಿ, ವಿಜಯಕುಮಾರ ಸಿದ್ರಾಮಶೆಟ್ಟಿ, ಲಿಂಗರಾಜ ಖಳೂರ, ಶ್ರೀಮತಿ ಅಹೀಲ್ಯಾದೇವಿ ರಾಗಾ, ಶ್ರೀಮತಿ ಕಮಲಾಬಾಯಿ ಮಸೂದಿ ಅವರು ಸೇರಿದಂತೆ ಮಂಗಲಪೇಟ್ ಬಡಾವಣೆಯ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.