ಸಡಗರ ಸಂಭ್ರಮದಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು

ಮಂಡ್ಯ: ಜೂ.01:- ಬೇಸಿಗೆ ರಜೆ ಕಳೆದ ನಂತರ 2023-24 ನೇ ಸಾಲಿನ ಶೈಕ್ಷಣಿಕ ವμರ್Áರಂಭದ ಮೊದಲ ದಿನವಾದ ಇಂದು ಶಾಲೆಗಳಲ್ಲಿ ಮಾವಿನ ಸೊಪ್ಪು ಹಾಗೂ ಹಸಿರು ತಳಿರು ತೋರಣಗಳಿಂದ ಶೃಂಗರಿಸಿ ವಿದ್ಯಾರ್ಥಿಗಳನ್ನು ಜಿಲ್ಲಾದ್ಯಂತ ಸ್ವಾಗತಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಬುಧವಾರ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಕಳೆದ ಒಂದೂವರೆ ತಿಂಗಳಿಂದ ಸರ್ಕಾರಿ ಶಾಲೆಗೆ ಘೋಷಿಸಿದ್ದ ಬೇಸಿಗೆ ರಜೆ ಅವಧಿ ಮುಗಿದಿದ್ದು, ವಿದ್ಯಾರ್ಥಿಗಳು ಸಂಭ್ರಮದಿಂದ ಶಾಲೆಗಳಿಗೆ ತೆರಳುವ ಮೂಲಕ ಮರಳಿ ಗೂಡಿಗೆ ಆಗಮಿಸಿದರು.
ಕಳೆದೆರೆಡು ದಿನಗಳಿಂದ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಿಬ್ಬಂದಿಗಳು ಆಯಾ ಶಾಲೆಗಳಿಗೆ ತೆರಳಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ನಗರ ಪ್ರದೇಶ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಹಸಿರು ತೋರಣ ಹಾಗೂ ಶಾಲೆಯ ಮುಂಭಾಗ ಬಣ್ಣ-ಬಣ್ಣದ ರಂಗೋಲಿ ಬಿಟ್ಟು ಹೆಂಗಳೆಯರೊಂದಿಗೆ ವಿದ್ಯಾರ್ಥಿನಿಯರು ಸಂಭ್ರಮಿಸುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಬೇಸಿಗೆ ರಜೆಯನ್ನು ಪ್ರವಾಸ ಹಾಗೂ ಅಜ್ಜಿಯಂದಿರ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಕಳೆದ ಖುಷಿಯಲ್ಲಿದ್ದ ಮಕ್ಕಳು ಸಂಭ್ರಮದಿಂದಲೇ ಮರಳಿ ಶಾಲೆಗೆ ತೆರಳಿದರು. ಮೊದಲ ದಿನವಾದ ಇಂದು ಸ್ನೇಹಿತರೊಂದಿಗೆ ಕುಶಲೋಪರಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರಾರಂಭದ ದಿನವಾದ ಇಂದು ಶಾಲೆಗೆ ಆಗಮಿಸಿದ ಮಕ್ಕಳಿಗೆ ಗಣ್ಯರು ಹಾಗೂ ಶಿಕ್ಷಕರು ಸಿಹಿ ವಿತರಿಸಿ, ಹೂವುಗಳನ್ನು ನೀಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಇದು ಮಕ್ಕಳ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪ್ರಸಕ್ತ ಶೈಕ್ಷಣಿಕ ವμರ್Áರಂಭಕ್ಕೆ ಸಕಲ ಸಿದ್ಧತೆ ಕೈಗೊಳ್ಳುವಂತೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರಸಕ್ತ ಶೈಕ್ಷಣಿಕ ವμರ್Áರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯನ್ನು ಸುಣ್ಣಬಣ್ಣ ಹೊಡೆದು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿತ್ತು. ಶಾಲೆಯ ಮುಂದೆ ಚಪ್ಪರ- ಶಾಮಿಯಾನ ಹಾಕಿ ಶೃಂಗಾರಗೊಳಿಸಲಾಗಿತ್ತು, ಗಣ್ಯರನ್ನು ಆಹ್ವಾನಿಸಿ ಅಲ್ಲಲ್ಲಿ ಅಧಿಕೃತವಾಗಿ ಶಾಲಾರಂಭಕ್ಕೆ ಚಾಲನೆ ನೀಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಮಕ್ಕಳಿಗೆ ಸಮವಸ್ತ್ರ, ಪುಸ್ತಕ ವಿತರಣೆ:
ಇಂದಿನಿಂದ ಶಾಲಾ ತರಗತಿಗಳು ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲಕೃಷ್ಣ ಅವರು ಚಿಕ್ಕಮಂಡ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಹಿ, ಹೂ, ಪುಸ್ತಕ ಹಾಗೂ ಸಮವಸ್ತ್ರ ನೀಡಿ ಸಂತಸದಿಂದ ಮಕ್ಕಳನ್ನು ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ.ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್, ಶಾಲಾ ಮುಖ್ಯ ಶಿಕ್ಷಕರಾದ ಆರ್.ದೇವರಾಜು, ಅಕ್ಷರ ದಾಸೋಹ ಅಧಿಕಾರಿ ಹರೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಇಂದೇ ಬಿಸಿಯೂಟಕ್ಕೂ ಚಾಲನೆ:
ತಾಲೂಕಿನ ಕಿರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಚಾಲನೆ ನೀಡಿದರಲ್ಲದೇ ನಂತರ ಮಧ್ಯಾಹ್ನದ ಬಿಸಿ ಊಟವನ್ನು ವಿದ್ಯಾರ್ಥಿಗಳಿಗೆ ಬಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿ ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಶಾಲಾ ಸಮವಸ್ತ್ರ ಹಾಗೂ ಶಾಲಾ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ಬಿಇಒ ಉದಯ್ ಕುಮಾರ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಮಹೇಶ್, ಗಿರೀಶ್, ಬಿ.ಆರ್.ಸಿ ಉಮೇಶ್, ಮುಖ್ಯ ಶಿಕ್ಷಕಿ ಗೀತಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು
ಗುಲಾಬಿ ಹೂ ನೀಡಿ ಸ್ವಾಗತಿಸಿದ ಶಾಸಕ ದರ್ಶನ್‍ಪುಟ್ಟಣ್ಣಯ್ಯ:
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪಾಂಡಪವುರ ತಾಲ್ಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದರೆ, ರೈತರನ್ನು ಸಾಲ ಮುಕ್ತರನ್ನಾಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಯಾವುದೇ ಗ್ರಾಮಗಳು ಬೆಳೆಯಬೇಕಾದರೆ ಗ್ರಾಮದ ಶಾಲೆಗಳು ಮೊದಲು ಅಭಿವೃದ್ಧಿ ಆಗಬೇಕು. ಖಾಸಗಿಯವರು ಶಿಕ್ಷಣವನ್ನು ಉದ್ಯಮವನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಶಿಕ್ಷಣದ ಹೆಸರಿನಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿ ಶಿಕ್ಷಣ ಸಿಗುತ್ತಿಲ್ಲ ಎಂದು ಖಾಸಗಿಯವರು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಇದರಲ್ಲಿ ಪೋಷಕರದೇನು ತಪ್ಪಿಲ್ಲ. ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಬೇಕೆಂಬ ದೃಷ್ಟಿಯಿಂದ ಒಳ್ಳೆ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವ ಮನೋಭಾವ ಸರಿ ಎಂದರು.
ಖಾಸಗಿ ಶಾಲೆಗಳ ಸೌಲಭ್ಯ ಸರ್ಕಾರಿ ಶಾಲೆಯಲ್ಲಿ ಕೊಟ್ಟರೆ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ವ್ಯವಸ್ಥಿತವಾಗಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿದರೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೆ ಬರುತ್ತಾರೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ಡಾಲಿ ಧನಂಜಯ್ ಭಾಗವಹಿಸಿದ್ದರು. ಮಕ್ಕಳು ಚಲನಚಿತ್ರ ನಟ ಡಾಲಿ ಧನಂಜಯ್ ಜೊತೆ ಸೆಲ್ಪಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.