ಸಡಗರದ ಗುಂಜಾನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

ತಿ.ನರಸೀಪುರ: ಇ.07:- ಇದಕ್ಷಿಣ ಕಾಶಿ ತ್ರಿವೇಣಿಸಂಗಮದ ತಟದ ದೇಗುಲದಲ್ಲಿರುವ ಮಹಾಲಕ್ಷ್ಮಿ ಸಮೇತ ಶ್ರೀ ಗುಂಜಾ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಗುರುವಾರ ಸಂಭ್ರಮ ಸಡಗರದಿಂದ ನಡೆಯಿತು.
ತಾಲೂಕು ದಂಡಾಧಿಕಾರಿ ಸಿ.ಜೆ.ಗೀತಾ ಅಲಂಕೃತ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಪ್ರಧಾನ ಅರ್ಚಕ ಸಂಪತ್ ಕುಮಾರ್ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ರಥವು ಮೊದಲಿಗೆ ದೇಗುಲ ಸುತ್ತ ಪ್ರದಕ್ಷಿಣೆಗೊಂಡು ಸಂಪ್ರದಾಯದಂತೆ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಾಗಿ ತೇರಿನ ಬೀದಿಯಲ್ಲಿ ಉತ್ತರಾಭಿಮುಖವಾಗಿ ವಿರಾಜಮಾನಗೊಂಡಿತು.
ರಾಜ್ಯ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಮಹಾಲಕ್ಷ್ಮಿ ಸಮೇತ ಶ್ರೀ ಗುಂಜಾ ನರಸಿಂಹಸ್ವಾಮಿ ರಥೋತ್ಸವಕ್ಕೆ ಹಣ್ಣು -ಜವನ ಎಸೆದು ಭಕ್ತ ಪರವಶರಾದರು.
ಪ್ರಸಾದ ವಿನಿಯೋಗ:
ಬ್ರಹ್ಮ ರಥೋತ್ಸವ ನಿಮಿತ್ತ ದೇವಾಲಯದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಪ್ರಸಾದ ವಿನಿಯೋಗ ನಡೆಯಿತು.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹರಕೆ ಹೊತ್ತ ಭಕ್ತರು ಮಜ್ಜಿಗೆ ,ಪಾನಕ ಮತ್ತು ಕೋಸಂಬರಿ ವಿತರಿಸಿ ಭಕ್ತಿಭಾವ ಮೆರೆದರು.
ಬ್ರಹ್ಮ ರಥೋತ್ಸವದಲ್ಲಿ ಶಾಸಕ ಎಂ.ಅಶ್ವಿನ್ ಕುಮಾರ್,ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಬಿಜೆಪಿ ಸಂಭಾವ್ಯಅಭ್ಯರ್ಥಿ ಡಾ.ರೇವಣ್ಣ,ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ಭಾಗವಹಿಸಿ ದೇವರ ದರ್ಶನ ಪಡೆದರು.