ಸಡಗರದಿಂದ ಗಜಾನನ ಮೂರ್ತಿ ಪ್ರತಿಷ್ಠಾಪನೆ

ಕುಂದಗೋಳ,ಜ9: ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ಕಲ್ಮೇಶ್ವರ ಗಜಾನನ ಮೂರ್ತಿಯನ್ನು ಸಡಗರದಿಂದ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಾಭಿಷೇಕ ನೆರವೇರಿಸಲಾಯಿತು.
ಬಳಿಕ ಷ.ಬ್ರ.ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಗ್ರಾಮದ ಭಕ್ತರು ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪರಶುರಾಮ ನಾಗಮೂರ್ತಿ ಪ್ರತಿಷ್ಠಾಪನೆ, ಮಾರುತಿ ದೇವಸ್ಥಾನದಲ್ಲಿ ನವಗ್ರಹ ಮೂರ್ತಿ ಪ್ರತಿಷ್ಠಾಪನೆ, ಗುರುಪಾದೇಶ್ವರ ಮಠದಲ್ಲಿ ಕಳಸಾರೋಹಣ ಕಾರ್ಯಕ್ರಮಗಳು ನೆರವೇರಿದವು.
ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮುಕ್ತಿಮುನಿ ಸ್ವಾಮಿಗಳು ಹಾಗೂ ಚಿಕ್ಕನರ್ತಿ ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಜಿಲ್ಲಾ ಪಂಚಾಯಿತಿ ಅನುದಾನ ಒದಗಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎನ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರು ಕುಂಭ ಹೊತ್ತ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಭಕ್ತಾಧಿಗಳಿಗೆ ಅನ್ನ ಪ್ರಸಾದದ ಸೇವೆ ನಡೆಯಿತು. ತಾಲೂಕಿನ ಸಮಸ್ತ ಭಕ್ತಾದಿಗಳು ಆಗಮಿಸಿ ದೈವಿ ಕೃಪೆಗೆ ಪಾತ್ರರಾದರು. ಊರಿನ ಎಲ್ಲಾ ಕಾರ್ಯಕ್ರಮವನ್ನು ಡಾ.ಜಗದೇವಯ್ಯ ಸ್ವಾಮಿಗಳು ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ನಡೆದವು.