ಸಜ್ಜನರ ರಕ್ಷಣೆ ದುರ್ಜನರ ಶಿಕ್ಷಿಸಿ ರಾಜ್ಯಪಾಲರ ಕರೆ

ಬೆಂಗಳೂರು, ಜ.೭- ಪೊಲೀಸರ ಕೆಲಸ ಭಯದಿಂದ ನಡೆಯುವುದಿಲ್ಲ ಬದಲಾಗಿ ಪ್ರೀತಿಯಿಂದ ಆಗಲಿದೆ. ನೀವು ಜನರಿಗೆ ಎಷ್ಟು ಪ್ರೀತಿ ಕೊಡುತ್ತಿರೋ ಅಷ್ಟೇ ವಿಶ್ವಾಸ ಜನರಿಂದ ನಿಮಗೆ ಸಿಗಲಿದೆ ಎಂದು ಎಂದು ರಾಜ್ಯಪಾಲ ವಜುಬಾಯಿ ವಾಲಾ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ೭೭ ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ೨೦೧೮-೧೯ ಸಾಲಿನ ಸ್ವಾತಂತ್ರ್ಯ ಹಾಗೂ ಗಣ ರಾಜ್ಯೋತ್ಸವ ಸಂದರ್ಭದಲ್ಲಿ ಘೋಷಣೆಯಾದ ರಾಷ್ಟ್ರಪತಿಗಳ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು ಸಜ್ಜನರಿಗೆ ರಕ್ಷಣೆ ನೀಡಿ, ದುರ್ಜನರ ಮನಸ್ಥಿತಿಯನ್ನು ಶಿಕ್ಷಿಸಿ ಎಂದು ಕಿವಿಮಾತು ಹೇಳಿದರು.
ಬದುಕಿರುವಷ್ಟು ದಿನ ಶೌರ್ಯ, ಪೌರುಷ ಮತ್ತು ಗರ್ವದಿಂದ ಬದುಕಬೇಕು. ಪೊಲೀಸರದು ಪೌರುಷತ್ವದ ಕೆಲಸವಾಗಿದೆ.
ಪೊಲೀಸರ ಕೆಲಸ ಭಯದಿಂದ ನಡೆಯುವುದಿಲ್ಲ ಬದಲಾಗಿ ಪ್ರೀತಿಯಿಂದ ಆಗಲಿದೆ ಎಂದರು.
ನೀವು ಜನರಿಗೆ ಎಷ್ಟು ಪ್ರೀತಿ ಕೊಡುತ್ತಿರೋ ಅಷ್ಟೇ ವಿಶ್ವಾಸ ಜನರಿಂದ ನಿಮಗೆ ಸಿಗಲಿದೆ. ಒಳ್ಳೆಯವರನ್ನು ರಕ್ಷಣೆ ಮಾಡಿ, ದುಷ್ಟರ ಮನಸ್ಥಿತಿಯನ್ನು ನಾಶ ಮಾಡಿ. ಒಳ್ಳೆಯವರಿಗೆ ಶಾಂತಿಯ ವಾತಾವರಣ ನಿರ್ಮಾಣ ಮಾಡಿ. ಗೂಂಡಾಗಿರಿ ಮಾಡುವವರನ್ನು ಹಿಡಿದು ಬುದ್ದಿ ಕಲಿಸಿ. ತಪ್ಪು ಮಾಡಿದವರ ವಿರುದ್ಧ ಸಾಕ್ಷ್ಯ ಹೇಳುವವರಿಗೆ ಧೈರ್ಯ ನೀಡಿ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಸೇರಿ ಯಾರೇ ಪ್ರತಿಭಟನೆ ಮಾಡಿದರೂ, ವಿರೋಧ ಪಕ್ಷಗಳು ಹಂಗಾಮ ನಡೆಸಿದರೂ ಪೊಲೀಸರು ಬೇಕು. ಎಲ್ಲಿಯಾದರೂ ಬೆಂಕಿ ಹಚ್ಚಿದರೂ. ಸಂಕಷ್ಟದಲ್ಲಿರುವವರನ್ನು ರಕ್ಷಣೆ ಮಾಡಲು, ಕಟ್ಟಡ ಕುಸಿದು ಜನ ಅದರ ಕೆಳಗೆ ಸಿಲುಕಿದಾಗ ರಕ್ಷಿಸಲು ಪೊಲೀಸರು ಬೇಕು. ಕೊಲೆಯಾಗಲಿ, ಗುಂಡಾಗಳ ಜಗಳ ಆಗಲಿ ಅಲ್ಲಿ ಪೊಲೀಸರು ಇರಬೇಕು. ಜನರ ರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡುವುದು ಪೊಲೀಸ್ ಇಲಾಖೆ ಮಾತ್ರ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದವರಿಗೆ ರಾಷ್ಟ್ರಪತಿಗಳ ಪದಕ ಸಿಕ್ಕಿದೆ. ಪದಕ ಪಡೆದಿದ್ದು ದೊಡ್ಡ ಕೆಲಸ ಅಲ್ಲ, ಅದರಿಂದ ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲೂ ಅದನ್ನು ಉಳಿಸಿಕೊಳ್ಳಲು ಇನ್ನಷ್ಟು ನಿಷ್ಠೆಯಿಂದ ಕೆಲಸ ಮಾಡಿ. ಪದಕ ಪಡೆಯದೇ ಇರುವವರು ಉತ್ತಮ ಕೆಲಸ ಮಾಡಿ ಮುಂದಿನ ಬಾರಿ ಪದಕ ಪಡೆಯುವಂತಾಗಲಿ ಎಂದು ಹಾರೈಸಿದರು.
ಪೊಲೀಸರ ಯಾವುದೇ ಬೇಡಿಕೆಯಿದ್ದರೂ ಅದನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲನಾಗಿ ನಾನು ರಾಜಭವನದಲ್ಲಿ ಇರುವವರೆಗೂ ನಿಮ್ಮ ಪರವಾಗಿ ಇರುತ್ತೇನೆ. ಯಾರಾದರೂ ನಿಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಈ ಹೋರಾಟದಲ್ಲಿ ಹಲವಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಜನರ ಒಳಿತಿಗಾಗಿ ಕೆಲಸ ಮಾಡುವವರಿಗೆ ಒಳ್ಳೆಯದಾಗಬೇಕು. ಕೊರೊನಾ ಸಂದರ್ಭದಲ್ಲಿ ಮನೆಯಿಂದ ಹೊರ ಬರಬೇಡಿ ಎಂದು ವೈದ್ಯರು ಸೇರಿದಂತೆ ಯಾರು ಹೇಳಿದರು ಜನ ಕೇಳಲಿಲ್ಲ. ಪೊಲೀಸರು ಹೇಳಿದಾಗ ಮಾತ್ರ ಪಾಲನೆ ಮಾಡಿದರು ಎಂದರು.