ಸಚಿವ ಹೆಬ್ಬಾರ್ ಉತ್ತರಕ್ಕೆ ಸುಸ್ತೋಸುಸ್ತು

ಬೆಂಗಳೂರು,ಸೆ.೧೬- ಉತ್ತರ ಸಾಕು ಸಾಕು ಎಂದರೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಉತ್ತರದ ಮೇಲೆ ಉತ್ತರ ನೀಡುತ್ತಿದ್ದನ್ನು ಕಂಡು ಇಡೀ ಸದನ ಬೇಸ್ತು ಬಿದ್ದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.
ಸಲೀಂ ಅಹ್ಮದ್ ಪರವಾಗಿ ಪ್ರಶ್ನೆ ಕೇಳಿದ ಗೋವಿಂದರಾಜು ಅವರು ಉತ್ತರ ಸಾಕು ಸಾಕಷ್ಟು ಕೊಟ್ಟಿದ್ದೀರಿ ಎಂದರೂ ಸಚಿವ ಶಿವರಾಂ ಹೆಬ್ಬಾರ್ ಅವರು ತಮ್ಮ ಇಲಾಖೆಯ ಮಾಹಿತಿಗಳನ್ನು ನೀಡಲು ಮುಂದಾದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ರಘುನಾಥ್ ಮಲ್ಕಾಪುರೆ ಅವರು ಥ್ಯಾಂಕ್ಯು ಸರ್ ಥ್ಯಾಂಕ್ಯು ಇದು ಪ್ರಶ್ನೋತ್ತರ ಉತ್ತರ ಕೊಟ್ಟಿದ್ದೀರಿ ಸಾಕು ಎಂದರೂ ಸಚಿವರು ಉತ್ತರ ಮುಂದುವರೆಸಿದ್ದರು.
ಇದರಿಂದ ಬೇಸ್ತು ಬಿದ್ದ ಗೋವಿಂದರಾಜು, ಸಚಿವರು ಚುನಾವಣಾ ಭಾಷಣ ಮಾಡಿದಂತಿದೆ. ಉತ್ತರ ಸಾಕು ಎಂದರೂ ಬಿಡುತ್ತಿಲ್ಲವಲ್ಲ ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್ ಭೋಜೇಗೌಡ, ಬಿಜೆಪಿಯ ತೇಜಸ್ವಿನಿ ಗೌಡ ಅವರು ಇನ್ನು ಮುಂದೆ ಕಾರ್ಮಿಕ ಸಚಿವರಿಗೆ ಯಾರೂ ಪ್ರಶ್ನೆ ಕೇಳುವುದಿಲ್ಲ. ಆ ರೀತಿ ಉತ್ತರ ಕೊಟ್ಟಿದ್ದಾರೆ ಎಂದರು. ಇದಕ್ಕೆ ಸಭಾ ನಾಯಕ ಕೋಟಾ ಶ್ರೀನಿವಾಸಪೂಜಾರಿರವರು ದನಿ ಗೂಡಿಸಿದರು.
ಇಡೀ ಸದನ ಉತ್ತರ ಸಾಕು ಸಾಕು ಎಂದರೂ ಸಚಿವ ಶಿವರಾಂ ಹೆಬ್ಬಾರ್ ಅವರು ಮುಖ್ಯವಾದ ವಿಷಯವನ್ನು ಹೇಳಬೇಕಾಗಿದೆ. ಇನ್ನೂ ೨-೩ ನಿಮಿಷಗಳ ಕಾಲಾವಧಿ ಕೊಡಿ ಎಂದು ಸಭಾಪತಿಗಳಿಗೆ ಮೇಲಿಂದ ಮೇಲೆ ಮನವಿ ಮಾಡಿದರು.
ಈ ವೇಳೆ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ೨೦೧೯ರಿಂದ ೨೦೨೦-೨೨-೨೩ನೇ ಸಾಲಿನವರೆಗೂ ೬,೩೯೩ ಮಂದಿಗೆ ೮೪೧ ಕೋಟಿ ರೂ. ನೀಡಲಾಗಿದೆ.
ವಿದ್ಯಾರ್ಥಿ ವೇತನ ಮೊತ್ತವನ್ನು ಸ್ನಾತಕೋತ್ತರದವರೆಗೆ ದ್ವಿಗುಣ ಮಾಡಲಾಗಿದೆ. ಕೆಲವು ಕೋರ್ಸ್‌ಗಳನ್ನು ಹೊಸದಾಗಿ ವಿದ್ಯಾರ್ಥಿ ವೇತನಕ್ಕೆ ಸೇರಿಸಲಾಗಿದೆ ಎಂದರು.
ಕಾರ್ಮಿಕರ ಮಕ್ಕಳು ಐಐಟಿ, ಎನ್‌ಐಟಿಯಲ್ಲಿ ವ್ಯಾಸಂಗ ಮಾಡಿದರೆ ಕಾರ್ಮಿಕ ಇಲಾಖೆಯೇ ಶಿಕ್ಷಣದ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗ, ಬೆಂಗಳೂರು, ಬೆಳಗಾವಿ, ಚಾಮರಾಜನಗರ ಸೇರಿದಂತೆ ರಾಜ್ಯದ ೭ ಕಡೆ ವಲಸೆ ಕಾರ್ಮಿಕರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ ಎಂದರು.
ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಐಎಎಸ್, ಕೆಎಎಸ್ ತರಬೇತಿ ನೀಡುವ ಜತೆಗೆ ಮಾಸಿಕವಾಗಿ ೬ ಸಾವಿರ ರೂ. ಸ್ಟೈಫಂಡ್ ನೀಡಲಾಗುತ್ತದೆ ಎಂದು ಹೇಳಿದರು.
೩೫ ಜನರಿಗೆ ತಲಾ ೩೮ ಲಕ್ಷ ವೆಚ್ಚದಲ್ಲಿ ಪೈಲೆಟ್ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.