ಸಚಿವ ಹರ್ಷವರ್ಧನ್ ರಾಜೀನಾಮೆಗೆ ಚಿದು ಆಗ್ರಹ

ನವದೆಹಲಿ,ಏ.೨೪- ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕು ಹೆಚ್ಚಳವಾಗುವ ಬಗ್ಗೆ ಕಳೆದ ವರ್ಷ ಏಪ್ರಿಲ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲೇ ಸಂಸದೀಯ ಸಮಿತಿ ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೆ, ಸರ್ಕಾರ ನಿನ್ನೆಯಿಂದ ಕೈಗೊಳ್ಳುತ್ತಿರುವ ಕ್ರಮಗಳನ್ನು ಮೊದಲೇ ಏಕೆ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದು ನಿರ್ಲಕ್ಷ್ಯವಲ್ಲವೇ. ಇದಕ್ಕೆ ಯಾರು ಜವಾಬ್ದಾರರಲ್ಲವೇ ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಈ ನಿರ್ಲಕ್ಷ್ಯದ ಹೊಣೆ ಹೊತ್ತು ಆರೋಗ್ಯ ಸಚಿವರು ಮತ್ತು ಕಾರ್ಯದರ್ಶಿ ಅವರನ್ನು ರಾಜೀನಾಮೆ ನೀಡಬೇಕೆಂದು ಕೇಳಬಾರದೇಕೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ರೋಗಿಗಳನ್ನು ದಾಖಲು ಮಾಡಿಕೊಳ್ಳುವಂತೆ ಜನ ರೋಧಿಸುತ್ತಿದ್ದಾರೆ. ಸೋಂಕಿತರ ಪರೀಕ್ಷೆ ನಡೆಸುವಂತೆ ವೈದ್ಯರನ್ನು ಬೇಡಿಕೊಳ್ಳುತ್ತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಕರೆತರುವಾಗ ಆಕ್ಸಿಜನ್ ಸಿಲಿಂಡರ್‌ಗಳನ್ನು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರೆ. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವಂತೆ ಆಸ್ಪತ್ರೆಗಳು ಹೈಕೋರ್ಟ್‌ಗೆ ಮೊರೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.
ಆರೋಗ್ಯ ಸಚಿವರೂ ಒಂಗೊಂಡಂತೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಯಾರಿಗೇ ಆಗಲಿ ಮನಸಾಕ್ಷಿ ಇದ್ದರೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.