ಸಚಿವ ಸ್ಥಾನ ನೀಡಿ ಪ್ರಾದೇಶಿಕ ಸಮತೋಲನೆ ಕಾಪಾಡಿ: ದಸ್ತಿ

ಕಲಬುರಗಿ,ನ.19- ಕಳೆದ ವರ್ಷ ಜುಲೈ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿಮಂಡದಲ್ಲಿ ಸಿಗಬೇಕಾದ ಪ್ರಾತಿನಿದಿತ್ವ ಸಿಗದೆ ನಿರ್ಲಕ್ಷವಾಗಿರುವದರಿಂದ ಬರುವ ಮಂತ್ರಿ ಮಂಡಲದ ವಿಸ್ತಿರಣದಲ್ಲಿ ಈ ಪ್ರದೇಶಕ್ಕೆ ಆಧ್ಯತೆ ನೀಡಬೇಕು ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಒತ್ತಾಯಿಸಿದ್ದಾರೆ.
ಈ ಭಾಗಕ್ಕೆ ನೀಡಬೇಕಾದ ನಮ್ಮ ಹಕ್ಕಿನ ಮಂತ್ರಿ ಸ್ಥಾನಗಳು ನೀಡಿ ಪ್ರಾದೇಶಿಕ ಸಮತೋಲನೆ ಕಾಪಾಡಲು ಮತ್ತು ಸಂವಿಧಾನ ಬದ್ಧ ವಿಶೇಷ ಸ್ಥಾನಮಾನಕ್ಕೆ ಪೂರಕವಾಗಿ ಸ್ಪಂದಿಸಿ ಬದ್ಧತೆ ಪ್ರದರ್ಶಿಸಿಸಲು ಸಮಿತಿ ಮುಖ್ಯಮಂತ್ರಿಗಳಿಗೆ ಅವರು ಮನವಿ ಮಾಡಿದ್ದಾರೆ.
ಈ ಹಿಂದೆ 2008,9,10 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಇದೆ ಯಡಿಯೂರಪ್ಪನವರು ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಿದರು. ಈಗಲೂ ಸಹ ಅಂಥದೆ ಸ್ಪಂದನೆ ಸಿಗುವುದೆಂದು ಅಪಾರ ನಿರೀಕ್ಷೆ ಇಟ್ಟುಕೊಂಡ ನಮ್ಮ ಪ್ರದೇಶಕ್ಕೆ ನ್ಯಾಯ ಒದಗಿಸಬೇಕಾಗಿದೆ.
ರಾಜ್ಯದ ಶೇಕಡಾ 23ರಷ್ಟು ಬೂ ಪ್ರದೇಶ ಮತ್ತು ಶೇ 20ರಷ್ಟು ಜನಸಂಖ್ಯೆ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಕಾರಣದಿಂದಲೇ ವಿಶೇಷ ಸ್ಥಾನಮಾನ ನೀಡಲಾಗಿದೆ. ಸುಮಾರು 1ಕೋಟಿ 30 ಲಕ್ಷ ಜನಸಂಖ್ಯೆ ಇರುವ ನಮ್ಮ ಪ್ರದೇಶಕ್ಕೆ ಮಂತ್ರಿಮಂಡದಲ್ಲಿ 8 ಮಂತ್ರಿ ಸ್ಥಾನಗಳು ಸಿಗಲೇಬೇಕು ಆದರೆ ಈಗ ಪ್ರಾತಿನಿದಿತ್ವ ಸಿಕ್ಕಿರುವದು ಕೇವಲ ಎರಡು ಸಚಿವ ಸ್ಥಾನಗಳು ಮಾತ್ರ. ಕಲಬುರಗಿ, ಯಾದಗೀರ, ರಾಯಚೂರ, ಕೊಪ್ಪಳ ಜಿಲ್ಲೆಗಳಿಗೆ ಸಚಿವ ಸ್ಥಾನವೇ ಸಿಕ್ಕಿಲ್ಲ.
ಈ ಪ್ರದೇಶದಲ್ಲಿ ಮಂತ್ರಿ ಸ್ಥಾನಕ್ಕೆ ಅರ್ಹರಿರುವ ಎಲ್ಲಾ ವರ್ಗದ ಶಾಸಕರು ಇದ್ದಾರೆ, ಹೀಗಿರುವಾಗ ಬರುವ ಮಂತ್ರಿ ಮಂಡಲದ ವಿಸ್ತರಣೆ ಇಲ್ಲವೆ ಪುನರ್ಚನೆಯ ಸಂದರ್ಭದಲ್ಲಿ ನಮ್ಮ ಹಕ್ಕಿನ ಸಚಿವ ಸ್ಥಾನಗಳು ನೀಡಿ ನಮ್ಮ ಪ್ರದೇಶಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರ ಹೀಗೆ ಮಾಡದೆ ನಮ್ಮ ಪ್ರದೇಶಕ್ಕೆ ಮತ್ತೆ ನಿರ್ಲಕ್ಷಿಸಿದರೆ, ಸರ್ಕಾರ ನಮ್ಮ ಭಾಗಕ್ಕೆ ರಾಜಾರೋಷವಾಗಿ ಮಲತಾಯಿ ಧೋರಣೆ ಮಾಡುವದು ಸ್ಪಷ್ಟವಾಗುತ್ತದೆ.
ಇಂಥಹ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಶಾಸಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಂಘಟಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಸಮಿತಿ ಒತ್ತಾಯಿಸುತ್ತದೆ.ಈ ವಿಷಯಕ್ಕೆ ನಮ್ಮ ಪ್ರದೇಶದ ಶಾಸಕರು ಸಾಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ಅವರ ಮನೆಗಳ ಮುಂದೆ ಸತ್ಯಾಗ್ರಹ ನಡೆಸುವದು ಅನಿವಾರ್ಯ ವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.