
ಬ್ಯಾಡಗಿ,ಮೇ25: ಹಾವೇರಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಬ್ಯಾಡಗಿಯ ಹಾಲಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕೆಂದು ಕಾಂಗ್ರೆಸ್ ಮುಖಂಡರಾದ ನ್ಯಾಯವಾದಿ ಡಿ.ಎಚ್.ಬುಡ್ಡನಗೌಡ್ರ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ ಸದಸ್ಯರಾಗಿ, ಎರಡು ಬಾರಿ ಹಾವೇರಿ ಮತ್ತು ಎರಡು ಬಾರಿ ಬ್ಯಾಡಗಿ ಸೇರಿದಂತೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಶಾಸಕ ಬಸವರಾಜ ಶಿವಣ್ಣನವರ ಈ ಹಿಂದೆ ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಬಂದಿಖಾನಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದ್ದು, ಜೊತೆಗೆ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ. ಅವರಿಗೆ ಸಚಿವ ಸ್ಥಾನವನ್ನು ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದ್ದು, ಈ ಬಗ್ಗೆ ಪಕ್ಷದ ವರಿಷ್ಠರು ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿದರು.
ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ಮುಂಬರುವ ತಾಪಂ.ಜಿಪಂ. ಎಪಿಎಂಸಿ ಹಾಗೂ ಲೋಕಸಭಾ ಚುನಾವಣೆಗಳ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯನ್ನು ಸಕ್ರಿಯವಾಗಿ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರುವ ಅನುಭವಿ ಹಾಗೂ ಹಿರಿಯ ಶಾಸಕರಾಗಿರುವ ಬಸವರಾಜ ಶಿವಣ್ಣನವರಿಗೆ ಮೊದಲ ಪಟ್ಟಿಯಲ್ಲಿಯೇ ಸಚಿವ ಸ್ಥಾನ ನೀಡಬೇಕಿತ್ತು. ಇದೀಗ ಎರಡನೇ ಪಟ್ಟಿಯ ಬಿಡುಗಡೆಗಾಗಿ ಕಾಯಬೇಕಾಗಿರುವುದು ಬೇಸರ ಉಂಟು ಮಾಡಿದೆ, ಎಲ್ಲ ರೀತಿಯಿಂದಲೂ ಸಚಿವ ಸ್ಥಾನಕ್ಕೆ ಸಮರ್ಥರಿರುವ ಬಸವರಾಜ ಶಿವಣ್ಣನವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿಯೇ ಸಚಿವ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೀರಪ್ಪ ಬಣಕಾರ, ಮುಖಂಡರಾದ ರುದ್ರಪ್ಪ ಹೊಂಕಣ, ಬೀರಪ್ಪ ಮೆಡ್ಲೇರಿ, ಶಿವಯೋಗಿ ಶಿಡೇನೂರು, ಹನುಮಂತಪ್ಪ ಶಿರಗಂಬಿ, ಶಂಭು ಪುಟ್ಟನಗೌಡ್ರ, ಹನುಮಂತಪ್ಪ ಇಮ್ಮಡಿ, ಗದಿಗೆಪ್ಪ ಲಮಾಣಿ, ಪರಮೇಶಪ್ಪ ಚಿಕ್ಕಳ್ಳಿ, ಸಂತೋಷ ಮೇಟಿ, ಸಂಗಮೇಶ ಮೈಲಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.