ಸಚಿವ ಸ್ಥಾನಕ್ಕೆ ಪೈಪೋಟಿ ಸಿ.ಎಂ.ಗೆ ತಲೆನೋವು

ಬೆಂಗಳೂರು, ಜ.೧೧-ಅಂತೂ ಇಂತೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ, ಸಚಿವಾಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರುತಿದ್ದಂತೆ ಅನೇಕ ಸಚಿವಾಕಾಂಕ್ಷಿಗಳು ಈ ಬಾರಿ ಶತಾಯ ಗತಾಯ ಅವಕಾಶ ಪಡೆಯಬೇಕು ಎನ್ನುವ ಹಠಕ್ಕೆ ಬಿದ್ದು ತೀವ್ರ ಲಾಬಿ ನಡೆಸಿದ್ದಾರೆ.
ಈ ತಿಂಗಳು ೧೩ ಅಥವಾ ೧೪ ರಂದು ಸಂಪುಟ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಂತೆ ಬಿಜೆಪಿಯ ಮೂಲ ಮತ್ತು ವಲಸೆ ಶಾಸಕರ ನಡುವೆ ಸಚಿವ ಸ್ಥಾನ ಪಡೆಯಲು ತೆರೆಮರೆಯಲ್ಲಿ ಬಿರುಸಿನ ಲಾಬಿ ಆರಂಭವಾಗಿದೆ.
ದೆಹಲಿಗೆ ನಿನ್ನೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಪ್ರಭಾವಿ ನಾಯಕ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದು ಬಂದಿದ್ದಾರೆ.
ಅಲ್ಲದೆ ಏಳು ಮಂದಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುವ ಗುಟ್ಟನ್ನು ಮುಖ್ಯಮಂತ್ರಿಗಳು ಇನ್ನೂ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಆ ೭ ಮಂದಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ.
ಈ ಬಾರಿ ಸಚಿವ ಸಂಪುಟ ವಿಸ್ತರಣೆಯಾಗಲಿದೆಯೇ ಅಥವಾ ಪುನರ್ ರಚನೆ ಆಗಲಿದೆ ಎನ್ನುವ ಬಗ್ಗೆ ಸಚಿವರು ಮತ್ತು ಶಾಸಕರಲ್ಲಿ ತಳಮಳ ಆರಂಭವಾಗಿದೆ .ಒಂದು ವೇಳೆ ಪುನರಚನೆಯಾದರೆ ಕೆಲವು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಶಾಸಕರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.
ಯಡಿಯೂರಪ್ಪ ಅವರು ಕೊಟ್ಟ ಮಾತಿನ ಪ್ರಕಾರ ವಿಧಾನಪರಿಷತ್ ಸದಸ್ಯರಾದ ಎಮ್ ಟಿ ಬಿ ನಾಗರಾಜ್, ಆರ್ ಶಂಕರ್ ಮತ್ತು ಶಾಸಕ ಮುನಿರತ್ನ ಅವರು ಸಚಿವರಾಗುವುದು ಬಹುತೇಕ ಖಚಿತವಾಗಿದೆ.
ಇನ್ನುಳಿದ ನಾಲ್ಕು ಸ್ಥಾನಗಳಿಗಾಗಿ ಬಿಜೆಪಿಯ ಮೂಲ ಶಾಸಕರಲ್ಲಿ ಪೈಪೋಟಿ ಆರಂಭಗೊಂಡಿದೆ ಈ ಪೈಕಿ ಹಿರಿಯ ಶಾಸಕ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಕಾರ್ಕಳದ ಸುನಿಲ್ ಕುಮಾರ್, ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ತಮ್ಮ ಪಾತ್ರವೂ ಇದೆ ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಅವರು ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿದ್ದು ಅವರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿರುವುದು ಹಲವು ಆಕಾಂಕ್ಷಿಗಳಲ್ಲಿ ಈ ಬಾರಿ ತಾವು ಕೂಡ ಸಚಿವರಾಗಬೇಕು ಎನ್ನುವ ಉತ್ಸಾಹ ಇಮ್ಮಡಿಗೊಂಡಿದೆ ಆದರೆ ಬಿಜೆಪಿ ವರಿಷ್ಠರು ಮತ್ತು ಯಡಿಯೂರಪ್ಪ ಅವರ ಕೃಪಾಕಟಾಕ್ಷ ಯಾರ ಮೇಲೆ ಇದೆ ಸದ್ಯದಲ್ಲೇ ತಿಳಿಯಲಿದೆ

ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ

ಏಳು ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ನಿರ್ಧಾರ

ಬಿಜೆಪಿ ಹೈಕಮಾಂಡ್ ಭೇಟಿ ಮಾಡಿದ ಬಳಿಕ ಯಡಿಯೂರಪ್ಪ ಅವರಿಂದ ಪ್ರಕಟಣೆ

ಸಂಪುಟಕ್ಕೆ ಯಾರೆಲ್ಲ ಸೇರ್ಪಡೆಯಾಗಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ

ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣವಾದ ಮೂರು ಮಂದಿಗೆ ಸಚಿವ ಸ್ಥಾನ ಗ್ಯಾರಂಟಿ

ಇನ್ನುಳಿದ ನಾಲ್ಕು ಮಂದಿಗೆ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ

ಸಚಿವ ಸ್ಥಾನಕ್ಕಾಗಿ ಮೂಲ ಮತ್ತು ವಲಸೆ ಶಾಸಕರ ನಡುವೆ ತೀವ್ರ ಪೈಪೋಟಿ.

ಈ ತಿಂಗಳ ೧೩ ಇಲ್ಲವೆ ೧೪ರಂದು ಸಂಪುಟ ವಿಸ್ತರಣೆ

ಸಂಪುಟ ವಿಸ್ತರಣೆಯು ಅಥವಾ ಪುನರ್ರಚನೆಯ ಎನ್ನುವ ಗುಟ್ಟು ಬಿಟ್ಟುಕೊಡದ ಮುಖ್ಯಮಂತ್ರಿ

ಪುನರಚನೆಯಾದರೆ ಕೆಲಸ ಸಚಿವರಿಗೆ ಕೊಕ್ ಸಾಧ್ಯತೆ