ಸಚಿವ ಸ್ಥಾನಕ್ಕೆ ಆಗ್ರಹ

ಬ್ಯಾಡಗಿ,ಮೇ21: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉಪ್ಪಾರ ಸಮುದಾಯದಿಂದ ಏಕೈಕ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸಿನ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಜ್ಯ ಉಪ್ಪಾರ ಮಹಾಸಭಾದ ಹಾವೇರಿ ಜಿಲ್ಲಾಧ್ಯಕ್ಷ ಮಂಜುನಾಥ ಉಪ್ಪಾರ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 30ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಉಪ್ಪಾರ ಸಮುದಾಯದಿಂದ ಏಕೈಕ ಪ್ರತಿನಿಧಿಯಾಗಿರುವ ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರದಿಂದ ಸ್ಪರ್ಧಿಸಿ ವಿಧಾನಸಭೆಯನ್ನು ಸತತ ನಾಲ್ಕನೇ ಬಾರಿ ಪ್ರವೇಶಿಸಿದ್ದು, ಅವರು ಸೇವಾ ಹಿರಿತನವನ್ನು ಹೊಂದಿರುವ ಅನುಭವಿ ಶಾಸಕರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಉಪ್ಪಾರ ಸಮುದಾಯಕ್ಕೆ ಪ್ರಾತಿನಿಧ್ಯವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ, ಸದಸ್ಯರಾದ ಮಾಲತೇಶ ಉಪ್ಪಾರ, ಶಿವಮೂರ್ತೆಪ್ಪ ಉಪ್ಪಾರ, ಸುರೇಶ ಉಪ್ಪಾರ, ಶಂಕರ ಉಪ್ಪಾರ, ಲಿಂಗರಾಜ ಹರ್ಲಾಪುರ, ಹನುಮಂತಪ್ಪ ಶಿರಗಂಬಿ, ಶಿವಬಸಪ್ಪ ಉಪ್ಪಾರ, ಬಸವರಾಜ ಬಡಗಡ್ಡಿ, ವೆಂಕಪ್ಪ ಉಪ್ಪಾರ, ಮಹಿಳಾ ಘಟಕದ ಲಕ್ಷ್ಮೀ ಉಪ್ಪಾರ, ಶೈಲಜಾ ಉಪ್ಪಾರ, ಅನುಪಮಾ ಉಪ್ಪಾರ ಹಾಗೂ ಉಪ್ಪಾರ ಸಮಾಜದ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.