ಸಚಿವ ಸ್ಥಾನಕ್ಕೆ ಆಗ್ರಹ


ಹುಬ್ಬಳ್ಳಿ,ಜೂ.7: ಉಪ್ಪಾರ ಸಮಾಜದ ಏಕೈಕ ಶಾಸಕರಾದ ಚಾಮರಾಜನಗರ ಕ್ಷೇತ್ರದ ಪುಟ್ಟರಂಗಶೆಟ್ಟಿಯವರಿಗೆ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷರಾದ ವಿಷ್ಣು ಲಾತೂರ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರಿದ್ದು, ಉಪ್ಪಾರ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 25 ಕ್ಷೇತ್ರಗಳಲ್ಲಿ ನಮ್ಮ ಸಮಾಜ ನಿರ್ಣಾಯಕರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ, ಅಧಿಕ ಮತಗಳಿಂದ ಆರಿಸಿ ತರುವಲ್ಲಿ ನಮ್ಮ ಸಮಾಜ ಪ್ರಮುಖ ಪಾತ್ರ ವಹಿಸಿತ್ತು, ಅಲ್ಲದೇ 15 ಕ್ಷೇತ್ರದಲ್ಲಿ ಎಂ.ಎಲ್.ಎ ಆಗುವ ಸಾಮರ್ಥ್ಯ ಹೊಂದಿದ್ದಾರೆ.

ಆದರೇ ಶಾಸಕರಾದ ಪುಟ್ಟರಂಗಶೆಟ್ಟಿ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದೇ ಇರುವುದರಿಂದ ನಮ್ಮ ಉಪ್ಪಾರ ಸಮುದಾಯಕ್ಕೆ ಅನ್ಯಾಯವಾಗಿದ್ದು, ಕಾಂಗ್ರೆಸ್ ಸರ್ಕಾರ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರು ಹಾಗೂ ಕರ್ನಾಟಕ ಉಪ್ಪಾರ ಸಂಘದ ಮಾಜಿ ಅಧ್ಯಕ್ಷರಾದ ಸುರೇಶ ಲಾತೂರ ಅವರಿಗೆ ಎಂ.ಎಲ್.ಸಿ ಮಾಡಬೇಕು

ಉಪ್ಪಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಹಾಗೂ ಸರ್ಕಾರದ ಅಧೀನದಲ್ಲಿರುವ ಸುಮಾರು 85 ಕ್ಕೂ ಹೆಚ್ಚಿನ ನಿಗಮಗಳಲ್ಲಿ ಉಪ್ಪಾರ ಸಮುದಾಯದ ಮುಖಂಡರಿಗೆ, ಯುವಕರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಬೇಕು. ಅದರೊಟ್ಟಿಗೆ ಉಪ್ಪಾರ ಸಮುದಾಯವನ್ನು ರಾಜಕೀಯವಾಗಿ ಮೇಲೆತ್ತುವ ಪ್ರಯತ್ನವನ್ನು ಮಾಡಬೇಕು ಎಂದು ಆಗ್ರಹ ಪಡಿಸಿದರು.

ವಿಶ್ವ ಭಗೀರಥ ಟ್ರಸ್ಟ್ ನ ಹುಬ್ಬಳ್ಳಿ ಅಧ್ಯಕ್ಷರಾದ ಈಶ್ವರ ಶಿರಕೋಳ ಮಾತನಾಡಿ, ಉಪ್ಪಾರ ಸಮಾಜ ಮೂರು ಬೇಡಿಕೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಬೇಕು.
ಇಲ್ಲದಿದ್ದರೆ ಮುಂದಿನ ವಾರ ಉಪ್ಪಾರ ಸಮಾಜವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಮಹಾಸಭಾದ ಕೋಶಾಧ್ಯಕ್ಷರಾದ ಸುಧೀರ ಉಪ್ಪಾರ, ಕಾರ್ಯದರ್ಶಿ ಭರತ ಮೈಲಾರ, ವಿಶ್ಚ ಭಗೀರಥ ಟ್ರಸ್ಟ್ ಅಧ್ಯಕ್ಷ ಮಾರುತಿ ಮೆಳವಂಕಿ, ಸೇರಿದಂತೆ ಉಪಸ್ಥಿತರಿದ್ದರು.