ಸಚಿವ ಸೋಮಣ್ಣ ರಾಜೀನಾಮೆಗೆ ಖಂಡ್ರೆ ಆಗ್ರಹ

ಬೆಂಗಳೂರು, ಸೆ. ೧೪- ರಾಜ್ಯದ ಜನರಿಗೆ ಮನೆ ಕಟ್ಟಿ ಕೊಡದಿದ್ದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ವಸತಿ ಸಚಿವ ವಿ. ಸೋಮಣ್ಣ ಅವರು ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುತ್ತಿದ್ದಾರೆ. ಅವರು ಹೇಳುತ್ತಿರುವುದೆಲ್ಲಾ ಸುಳ್ಳು. ವಸತಿ ಯೋಜನೆಗಳನ್ನು ಹಳ್ಳ ಹಿಡಿಸಿರುವ ಸೋಮಣ್ಣ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ಪ್ರದೇಶ ಕಾಂಗ್ರೆಸ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಅವರು, ವಸತಿ ಸಚಿವರು ಭಾವನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ವಸತಿ ಯೋಜನೆಗಳನ್ನು ಹಳ್ಳ ಹಿಡಿಸಿ ಬಡ ಫಲಾನುಭವಿಗಳ ಕಣ್ಣಲ್ಲಿ ನೀರು ತರಿಸುತ್ತಿದ್ದಾರೆ. ಇವರು ಇಲಾಖೆಯಿಂದ ತೊಲಗಿದರೆ ಮಾತ್ರ ಬಡವರ ಉದ್ಧಾರವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಭಾವನಾತ್ಮಕವಾಗಿ ಮಾತನಾಡುತ್ತಾ ಬಡವರಿಗೆ ಮನೆಗಳನ್ನು ನೀಡದಿರುವ ಸಚಿವ ಸೋಮಣ್ಣ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಸಿದರು.
ಸಚಿವ ಸೋಮಣ್ಣ ಅವರು ಒಂದು ಕಡೆ ಪಿಡಿಓಗಳ ಮೇಲೆ ಆರೋಪ ಮಾಡುತ್ತಾರೆ. ಮತ್ತೊಂದು ಕಡೆ ಭ್ರಷ್ಟ ಅಧಿಕಾರಿಯಾದ ಮಹದೇವಪ್ರಸಾದ್ ಅವರನ್ನೇ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಕೂರಿಸಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯಿಂದಲೇ ಮನೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಡ ಫಲಾನುಭುವಿಗಳ ಕಣ್ಣಲ್ಲಿ ನೀರು ತರಿಸುವ ಕೆಲಸ ನಡೆದಿದೆ. ಎರಡೂವರೆ ವರ್ಷದಿಂದ ಮನೆ ನಿರ್ಮಾಣ ನಿಂತಿದೆ. ಕಟ್ಟಿಕೊಳ್ಳುತ್ತಿರುವ ಮನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ೨.೫ ಲಕ್ಷ ಮನೆಗಳ ಅನುದಾನ ರದ್ದು ಮಾಡಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ದೂರಿದರು.
ಸಚಿವ ಸೋಮಣ್ಣ ಸುಳ್ಳು ಹೇಳುತ್ತಿದ್ದಾರೆ. ಈಗಾಗಲೇ ೧೫ ಲಕ್ಷ ವಸತಿ ವಂಚಿತರಿಗೆ ಮನೆ ಕಟ್ಟಲಾಗಿದೆ. ೭ ಲಕ್ಷ ೧೫ ಸಾವಿರ ಮನೆಗಳು ಪ್ರಗತಿಯಲ್ಲಿವೆ. ಆ ಮನೆಗಳಿಗೆ ಇನ್ನೂ ಬಾಕಿಯನ್ನೇ ಬಿಡುಗಡೆ ಮಾಡಿಲ್ಲ. ಈಗ ೫.೧೫ ಲಕ್ಷ ಮನೆಗಳ ಸಮೀಕ್ಷೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಡ್ರಗ್ ಹಗರಣದಲ್ಲಿ ಶಾಸಕ ಜಮೀರ್ ಹೆಸರು ಪ್ರಸ್ತಾಪಿ ಪ್ರತಿಕ್ರಿಯಿಸಿದ ಅವರು, ಜಮೀರ್ ಅವರೇ ತನಿಖೆ ಮಾಡಿ ಎಂದಿದ್ದಾರೆ. ಹೀಗಿರುವಾಗ ಊಹಾಪೂಹದ ಆರೋಪ ಮಾಡುವುದು ಸರಿಯಲ್ಲ ಎಂದರು. ಯಾರೇ ಆಗಲಿ ತಪ್ಪಿತ್ಥರನ್ನು ಪತ್ತೆಹಚ್ಚ ಶಿಕ್ಷೆ ನೀಡಲಿ. ಅದು ಬಿಟ್ಟು ಸುಮ್ಮನೆ ಯಾಱ್ಯಾರೋ ಹೆಸರು ಹೇಳುವುದು ಸರಿಯಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದರು. ಸಚಿವ ಸಿ.ಟಿ. ರವಿ ಅವರಿಗೆ ಡ್ರಗ್ಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ರಾಜ್ಯದಲ್ಲಿ ಕ್ಯಾಸಿನೋ ಪ್ರಾರಂಭಿಸಿದ್ದಕ್ಕೆ ಮುಂದಾದವರಿಗೆ ನೈತಿಕತೆ ಬಗ್ಗೆಯಾಗಲಿ, ಜಮೀರ್ ಅಹಮದ್ ಅವರ ಕ್ಯಾಸಿನೋ ಬಗ್ಗೆಯಾಗಲಿ ಮಾತನಾಡುವ ಹಕ್ಕಿಲ್ಲ ಎಂದು ಖಂಡ್ರೆ ಸಿ.ಟಿ. ರವಿ ವಿರುದ್ದ ವಾಗ್ದಾಳಿ ನಡೆಸಿದರು.