ಸಚಿವ ಸಂಪುಟದಲ್ಲಿ ಮಲತಾಯಿ ಧೋರಣೆ, ಮುಖ್ಯಮಂತ್ರಿಗಳಿಂದ ಕಲ್ಯಾಣ ಕರ್ನಾಟಕದ 1.3 ಕೋಟಿ ಜನರಿಗೆ ನಿರ್ಲಕ್ಷ್ಯ: ದಸ್ತಿ ಆಕ್ರೋಶ

ಕಲಬುರಗಿ:ಜ.14:ಭಾಷಾವಾರು ರಾಜ್ಯಗಳ ರಚನೆಯಾದ ನಂತರ 64 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರಾತಿನಿಧ್ಯತ್ವ ನೀಡದೆ ಮಲತಾಯಿ ಧೋರಣೆ ಅನುಸರಿಸುವ ಮುಖಾಂತರ ಕಲ್ಯಾಣ ಕರ್ನಾಟಕ ಪ್ರದೇಶದ 1.3 ಕೋಟಿ ಜನರಿಗೆ ಸಚಿವ ಸಂಪುಟದಲ್ಲಿ ಯಡಿಯೂರಪ್ಪನವರು ನಿರ್ಲಕ್ಷ ಮಾಡಿ ದ್ರೋಹ ಎಸಗಿರುವುದು ಖೇದಕರವಾದ ವಿಷಯವಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ನಿಯಮಗಳಂತೆ ರಾಜ್ಯಗಳ ರಚನೆ ಆಯಾ ರಾಜ್ಯದ ಸಮಸ್ತ ಜನಾಂಗದ ಅಭಿವೃದ್ಧಿ, ಪ್ರಾದೇಶಿಕ ಸಮತೋಲನೆ, ಜಿಲ್ಲಾವಾರು ಸಮತೋಲನೆ, ಸಾಮಾಜಿಕ ನ್ಯಾಯ ಕಾಪಾಡುವುದರ ಜೊತೆಗೆ “ಸರ್ವರಿಗೆ ಸಮಪಾಲು ಸರ್ವರ ಸಮಬಾಳಿ”ನಂತೆ ನ್ಯಾಯ ನೀಡಬೇಕೆಂದು ಭಾರತ ಪ್ರಜಾಪ್ರಭುತ್ವ ಒಕ್ಕೂಟ ವ್ಯವಸ್ಥೆಯನ್ವಯ ರಾಜ್ಯಗಳ ರಚನೆಯ ಮಾನದಂಡವಾಗಿದೆ. ಆದಾಗ್ಯೂ, ಪ್ರಸ್ತುತ ಯಡಿಯೂರಪ್ಪನವರ ಮಂತ್ರಿ ಮಂಡಲ ಭಾರತ ಸಂವಿಧಾನದ ಯಾವ ಮಾನದಂಡವನ್ನೂ ಗಣನೆಗೆ ತೆಗೆದುಕೊಂಡಿರುವದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಗೂ ನಿರ್ಲಕ್ಷ ಮಾಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಅದರಂತೆ ಭಾಷಾವಾರು ಪ್ರಾಂತ ರಚನೆಯ ವರದಿಯಾದ ಫಜಲ ಅಲಿ ವರದಿಯನ್ನು ಗಾಳಿಗೆ ತೂರಲಾಗಿದೆ. ಒಟ್ಟಾರೆ ಕರ್ನಾಟಕ ಮಂತ್ರಿ ಮಂಡಲ ಪ್ರಾದೇಶಿಕ ಅಸಮತೋಲನೆಗೆ ಎತ್ತಿ ತೋರಿಸುವಂತಹ ಮಂತ್ರಿ ಮಂಡಲವಾಗಿದೆ. ಸುಮಾರು 1.3 ಕೋಟಿ ಜನಸಂಖ್ಯೆ ಹೊಂದಿರುವ ವಿಶಾಲ ಪ್ರದೇಶದ ಕಲ್ಯಾಣ ಕರ್ನಾಟಕ ಏಳು ಜಿಲ್ಲೆಗಳ ನಮ್ಮ ಪ್ರದೇಶಕ್ಕೆ ಮಂತ್ರಿಮಂಡಲದಲ್ಲಿ ಪ್ರಾತಿನಿಧಿತ್ವ ನೀಡದೆ ಮತದಾರರಿಗೆ ಮತ್ತು ಮತದಾರರಿಂದ ಆರಿಸಿ ಬಂದ ಜನಪ್ರತಿನಿಧಿಗಳಿಗೆ ಅವಮಾನ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ, ಇಂತಹ ನಿರ್ಲಕ್ಷ ಮಲತಾಯಿ ಧೋರಣೆಯ ಕಾರಣದಿಂದಲೇ ಪ್ರತ್ಯೇಕ ರಾಜ್ಯವೇ ನಮಗೆ ಅಂತಿಮ ನಿರ್ಣಾಯಕ ಎಂಬುದು ನಮ್ಮ ಪ್ರದೇಶದ ಜನಮಾನಸದಲ್ಲಿ ಮನದಟ್ಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಮತದಾರ ಪ್ರಭುಗಳಿಂದ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳು ಅದರಲ್ಲಿ ವಿಶೇಷವಾಗಿ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ಬಂದಿರುವ ಶಾಸಕರು ಕಲ್ಯಾಣ ಕರ್ನಾಟಕ ಪ್ರದೇಶದ 1.3 ಕೋಟಿ ಜನರ ಮಾನ ಮರ್ಯಾದೆ ಉಳಿಸಲು, ನಮ್ಮ ಅಸ್ತಿತ್ವವನ್ನು ಉಳಿಸಲು, 371ನೇ(ಜೆ) ಕಲಮಿನ ಸಂವಿಧಾನಬದ್ಧ ವಿಶೇಷ ಸ್ಥಾನಮಾನವನ್ನು ಉಳಿಸಲು ತಕ್ಷಣ ನಮ್ಮ ಭಾಗದ ಶಾಸಕರು ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಸಂಘಟಿತ ಒತ್ತಡ ತಂದು ನಮ್ಮ ಪ್ರದೇಶಕ್ಕೆ ನ್ಯಾಯ ದೊರಕಿಸಬೇಕು. ಇಲ್ಲವಾದರೆ, ಸಮಿತಿ ನಮ್ಮ ಜನಪ್ರತಿನಿಧಿಗಳ ಮನೆ ಮುಂದೆ ಅದರಲ್ಲೂ ವಿಶೇಷವಾಗಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳ ಮನೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.