ಸಚಿವ ವೇಲುಗೆ ಐಟಿ ಶಾಕ್ ೪೦ ಕಡೆ ದಾಳಿ

ಚೆನ್ನೈ,ನ.೩- ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಲೋಕೋಪಯೋಗಿ ಸಚಿವ ಇವಿ ವೇಲು ಅವರಿಗೆ ಸಂಬಂಧಿಸಿದ ನಿವಾಸ ಮತ್ತು ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ೪೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಆಧಾರ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ವೇಲು ಅವರ ತವರೂರು ತಿರುವಣ್ಣಾಮಲೈನಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಮೇಲೆ ಮುಂಜಾನೆಯಿಂದಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಇದರ ಜೊತೆಗೆ ಚೆನ್ನೈನ ಹಲವು ಪ್ರದೇಶಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರ ಜಾಲಾಡಿದ್ದಾರೆ.
ಲೋಕೋಪಯೋಗಿ ಇಲಾಖೆ ಸಚಿವ ಇವಿ ವೇಲು ಡಿಎಂಕೆಯ ಪ್ರಮುಖ ನಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಸಚಿವರ ಕುಟುಂಬದ ಒಡೆತನದ ಅವರ ನಿವಾಸಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸುಮಾರು ೪೦ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ತಮಿಳುನಾಡಿನಾದ್ಯಂತ ೪೦ ಸ್ಥಳಗಳಲ್ಲಿ ದಾಳಿ ನಡೆದಿದೆ.
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಸಚಿವರಲ್ಲಿ ಒಬ್ಬರಾಗಿರುವ ವೇಲು ಅವರು ತಿರುವಣ್ಣಾಮಲೈನಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.
ಮೂಲಗಳ ಪ್ರಕಾರ ಈ ದಾಳಿಗಳು ಸಚಿವರು ಮತ್ತು ಅವರ ಕುಟುಂಬ ನಡೆಸುವ ಸಂಸ್ಥೆಗಳು ಮತ್ತು ವ್ಯವಹಾರಗಳ ಶಂಕಿತ ತೆರಿಗೆ ವಂಚನೆಗೆ ಸಂಬಂಧಿಸಿವೆ. ಐಟಿ ದಾಳಿ ನಡೆಯುತ್ತಿರುವ ಎಲ್ಲಾ ಸ್ಥಳಗಳಲ್ಲಿ ಕೇಂದ್ರ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಮಟ್ಟದಲ್ಲಿ ನಿಯೋಜನೆ ಮಾಡಲಾಗಿದೆ.
ವೇಲು ಅವರ ಸಂಪುಟ ಸಹೋದ್ಯೋಗಿಗಳಾದ ವಿ ಸೆಂಥಿಲ್ ಬಾಲಾಜಿ- ಪ್ರಸ್ತುತ ಹಣ ವರ್ಗಾವಣೆ ಪ್ರಕರಣದಲ್ಲಿ ಪುಝಲ್ ಸೆಂಟ್ರಲ್ ಜೈಲಿನಲ್ಲಿರುವ ಕೆ ಪೊನ್ಮುಡಿ ಮತ್ತು ಅರಕ್ಕೋಣಂ ಸಂಸದ ಎಸ್ ಜಗತ್ರಕ್ಷಕನ್ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಂದ ದಾಳಿಗೆ ಒಳಗಾದ ನಾಲ್ಕನೇ ಹಿರಿಯ ಡಿಎಂಕೆ ನಾಯಕರಾಗಿದ್ದಾರೆ.ಮೆಡಿಕಲ್ ಮತ್ತು ದಂತವೈದ್ಯಕೀ ಕಾಲೇಜುಗಳು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ಸಚಿವ ವೇಲು ಅವರಿಗೆ ಸಂಬಂಧಿಸಿದ ಕಚೇರಿ, ಆಸ್ತಿ ಪಾಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ಧಾರೆ.
ಎಂ ಜಿ ರಾಮಚಂದ್ರನ್ ಅವರ ನೇತೃತ್ವದಲ್ಲಿ ಎಐಎಡಿಎಂಕೆಯಲ್ಲಿ ರಾಜಕೀಯ ಹಿನ್ನೆಲೆ ಹೊಂದಿರುವ ವೇಲು ಅವರು ೧೯೯೭ ರಲ್ಲಿ ಡಿಎಂಕೆಗೆ ಸೇರಿದರು. ಸ್ಟಾಲಿನ್ ಅವರ ನಿಕಟ ಸಹಾಯಕರಾಗಿದ್ದ ವೇಲು ಅವರು ೨೦೦೬-೨೦೧೧ ಡಿಎಂಕೆ ಸರ್ಕಾರದಲ್ಲಿ ಆಹಾರ ಸಚಿವರಾಗಿದ್ದರು ಮತ್ತು ೨೦೨೧ ರಲ್ಲಿ ಲಾಭದಾಯಕ ಪಿಡಬ್ಲ್ಯೂಡಿ ಖಾತೆ ಸಚಿವರಾಗಿದ್ದಾರೆ