ಸಚಿವ ಮಾಧುಸ್ವಾಮಿ ರಾಜಿನಾಮೆಗೆ ಒತ್ತಾಯ

ಕೋಲಾರ,ಜ.೯:ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಿರುವ ಕಾನೂನು ಸಚಿವರಾದ ಮಾಧುಸ್ವಾಮಿರನ್ನು ಸಚಿವ ಸಂಪುಟದಿಂದ ಕೂಡಲೇ ಕೈಬಿಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಗುರುವಾರದಂದು ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಸಚಿವರು, ಎಇಇ ವಿರುದ್ಧ ರಾಸ್ಕಲ್ ಒದ್ದರೆ ಎಲ್ಲಿ ಹೋಗಿ ಬಿದ್ದಿರುತ್ತೀಯ ಗೊತ್ತಾ. ನಿನ್ನ ಹೆಂಡ್ತಿ ಸೀರೆ ತೊಳೆಯುವುದಕ್ಕೆ ಯಾವ ಸೋಪು ತೆಗೆದುಕೊಂಡು ಹೋಗಿದ್ದೆ. ಈ ನನ್ಮಕ್ಕಳನ್ನು ಸಸ್ಪೆಂಡ್ ಮಾಡಿ ಎಂದು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳು ಕೆಲಸ ಮಾಡದೆ, ತಪ್ಪು ಮಾಡಿದ್ದರೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಿ ಯಾರ ಅಭ್ಯಂತರವೂ ಇಲ್ಲ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಕಾನೂನು ಸಚಿವರಾಗಿರುವ ಮಾಧುಸ್ವಾಮಿಯವರೇ ಕಾನೂನು ಉಲ್ಲಂಘಿಸಿ ಕೆಡಿಪಿ ಸಭೆಯಲ್ಲಿ ದುರಹಂಕಾರದಿಂದ ಮಾತನಾಡಿರುವುದು ಖಂಡನೀಯವಾಗಿದ್ದು, ಇದು ಹೊಸದಲ್ಲ. ಈಗಾಗಲೇ ಮೂರ್ನಾಲ್ಕು ಬಾರಿ ರಾಜ್ಯದ ವಿವಿಧ ಕಡೆಗೆ ಹೋಗಿದ್ದಾಗಲೂ ಈ ರೀತಿಯ ಪದಗಳನ್ನು ಬಳಕೆ ಮಾಡಿದ್ದಾರೆ.
ಹೀಗಾಗಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಹಾಗೂ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಬೇಕೆಂದು ಮುಖ್ಯಮಂತ್ರಿಗಳನ್ನು ಈ ಮೂಲಕ ಆಗ್ರಹಿಸುತ್ತಿರುವುದಾಗಿ ತಿಳಿಸಿದ್ದಾರೆ.