ಸಚಿವ ಭಾಗವತ್ ಮಾನವೀಯ ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ

ಮುಂಬೈ, ನ.೧೭- ದೆಹಲಿ-ಮುಂಬೈ ನಡುವಿನ ಇಂಡಿಗೊ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರೋರ್ವರನ್ನು ಸ್ವತಃ ವೈದ್ಯರಾಗಿರುವ, ಕೇಂದ್ರ ಹಣಕಾಸು ರಾಜ್ಯ ಸಚಿವ ಭಾಗವತ್ ಕೃಷ್ಣರಾವ್ ಕರಾಡ್ ಅವರು ಚಿಕಿತ್ಸೆ ನೀಡಿದ್ದು, ಸದ್ಯ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಭಾಗವತ್ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿ, ಟ್ವಿಟರ್ ಮೂಲಕ ಅಭಿನಂದಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ರಕ್ತದೊತ್ತಡದಲ್ಲಿನ ಏರುಪೇರಿನ ಕಾರಣಗಳಿಂದ ತಲೆಸುತ್ತು ಬಂದು ಬಿದ್ದಿದ್ದಾರೆ. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ.ಭಾಗವತ್ ಕರಾಡ್ ಅವರು ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದ್ದಾರೆ. ಡಾ.ಭಾಗವತ್ ಕರಾಡ್ ಅವರು ಮಕ್ಕಳ ತಜ್ಞರಾಗಿದ್ದಾರೆ. “ರಕ್ತದೊತ್ತಡ ಕುಸಿದ ಕಾರಣ ಅವರಿಗೆ ತಲೆಸುತ್ತು ಬಂದು ಬೆವರುತ್ತಿದ್ದರು. ಅವರು ಧರಿಸಿದ್ದ ಬಟ್ಟೆಯನ್ನು ಸಡಿಲಗೊಳಿಸಿ, ಎದೆಯ ಭಾಗವನ್ನು ಉಜ್ಜಿ ಹಾಗೂ ಅವರ ಕಾಲುಗಳನ್ನು ಮೇಲಕ್ಕೆ ಎತ್ತುವಂತೆ ಮಾಡಿದ ನಂತರ ಗ್ಲೂಕೋಸ್ ನೀಡಲಾಯಿತು. ೩೦ ನಿಮಿಷಗಳ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂತು” ಎಂದು ಭಾಗವತ್ ಕೃಷ್ಣರಾವ್ ಕರಾಡ್ ಅವರು ತಿಳಿಸಿದ್ದಾಗಿ ವರದಿಯಾಗಿದೆ. ಭಾಗವತ್ ಕೃಷ್ಣರಾವ್ ಕರಾಡ್ ಅವರ ಕಾರ್ಯವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಹೃದಯಾಳದಿಂದ ಸದಾ ಒಬ್ಬ ವೈದ್ಯರೇ! ನನ್ನ ಸಹವರ್ತಿಯಿಂದ ಉತ್ತಮ ಕಾರ್ಯವಾಗಿದೆ” ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.