ಸಚಿವ ಪ್ರಿಯಾಂಕ್ ಖರ್ಗೆ ವಜಾಕ್ಕೆ ತಳವಾರ್ ಒತ್ತಾಯ

ಕಲಬುರಗಿ,ಅ.3:ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ್‍ನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸದೇ ರಕ್ಷಣೆ ಮಾಡುತ್ತಿದ್ದು, ಅದರ ನೇರ ಹೊಣೆಯ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಮತ್ತು ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿ ಹಾಗೂ ಬಿಜೆಪಿ ಹಿರಿಯ ಮುಖಂಡರೂ ಮತ್ತು ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದಾಗ ನಮ್ಮ ನಿಯೋಗವು ಭೇಟಿ ಮಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು 24 ಗಂಟೆಯೊಳಗೆ ವರದಿ ಒಪ್ಪಿಸಿ ಎಂದು ಸೂಚಿಸಿದ್ದರು. ಆದಾಗ್ಯೂ, ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ದೂರಿದರು.
ದೇವಾನಂದ್ ಆತ್ಮಹತ್ಯೆ ಪ್ರಕರಣ ಸಂಭವಿಸಿ 76 ದಿನಗಳು ಕಳೆದಿವೆ. ಆರೋಪಿಗಳು ಬಹಿರಂಗವಾಗಿಯೇ ಓಡಾಡುತ್ತಿದ್ದಾರೆ. ಅವರ ವಿರುದ್ಧ ಮಾಡಬೂಳ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರೊಂದಿಗೆ ನಿಂತು ಭಾವಚಿತ್ರ ತೆಗೆಸಿಕೊಳ್ಳುತ್ತಾನೆ. ಅಂತಹ ವಿವಾದಿತ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲಿಯೂ ಹೋರಾಟಗಾರರ ವಾಟ್ಸ್‍ಪ್‍ಗಳಿಗೆ ಹಾಕುವ ಮೂಲಕ ಕ್ರೂರತೆ ಮೆರೆಯುತ್ತಿದ್ದಾರೆ. ಯಾಕೆ ಪೋಲಿಸರಿಗೆ ಆರೋಪಿಯನ್ನು ಬಂಧಿಸಲು ಆಗುತ್ತಿಲ್ಲ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಪ್ರಕರಣದ ಆರೋಪಿಗಳನ್ನು ಬಂಧಿಸಲು ಜಿಲ್ಲೆಯ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಹೆದರುತ್ತಿದ್ದಾರೆ. ಅಲ್ಲದೇ ಡಿವೈಎಸ್‍ಪಿ, ಸಿಪಿಐ ಹಂತದ ಅಧಿಕಾರಿಗಳೂ ಸಹ ಭಯಪಡುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಎಂದು ದೂರಿದ ಅವರು, ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯದ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದು, ಅವರು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ನೇರ ಹೊಣೆ ಜಿಲ್ಲಾ ಉಸ್ತುವಾರಿ ಸಚಿವರದ್ದು. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ ಪ್ರಿಯಾಂಕ್ ಖರ್ಗೆಯವರಿಗೆ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಹೋರಾಟದ ನೇತೃತ್ವ ವಹಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರು ಮಾತನಾಡಿ, ದೇವಾನಂದ್ ಸಾವಿನ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ಹೋರಾಟಗಾರರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಖಂಡನಾರ್ಹ. ಇಂತಹ ನೂರು ಪ್ರಕರಣಗಳನ್ನು ದಾಖಲಿಸಿದರೂ ಸಹ ನಾವು ಅಂಜುವುದಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಬಿಡುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಲಾರದಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ಪೋಲಿಸರಿಗೆ ಬಂದಿದೆ ಎಂದು ಹೇಳಿದ ಅವರು, ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಅದಕ್ಕಾಗಿ ಕೂಡಲೇ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು. ಪ್ರಕರಣದಲ್ಲಿ ಭಾಗಿಯಾದ ಪೋಲಿಸರಿಗೆ ಅಮಾನತ್ತುಗೊಳಿಸಬೇಕು. ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ಕೊಡಬೇಕು. ಅಲ್ಲದೇ ಮೃತ ದೇವಾನಂದ್ ಸಹೋದರ ಕರಣಕುಮಾರ್ ಕೊಟ್ಟ ಪುನರ್ ದೂರನ್ನು ದಾಖಲಿಸಬೇಕು ಹಾಗೂ ಆತನಿಗೆ ಅನುಕಂಪ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಕೊಡಬೇಕು. ಪ್ರಕರಣದಲ್ಲಿ ಪೋಲಿಸರೇ ಶಾಮೀಲಾಗಿರುವುದರಿಂದ ಸಿಓಡಿ ತನಿಖೆಯ ಬದಲು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಸಪ್ಪನಗೋಳ್, ಮೋಹನ್ ಪಾಟೀಲ್, ಗುಂಡು ಐನಾಪೂರ್, ನಿಂಗಪ್ಪ ದೇವಣಗಾಂವ್, ಅಮೃತ್ ಡಿಗ್ಗಿ, ಬಸವರಾಜ್ ಗುಂಡರಗೇರಿ, ಸುರೇಶ್ ಹುಡಗಿ, ರವಿ ಡೊಂಗರಗಾಂವ್, ಪ್ರೇಮ್ ಕೋಲಿ ಮುಂತಾದವರು ಉಪಸ್ಥಿತರಿದ್ದರು.